ಬೆಂಗಳೂರು : ಭಾರತಕ್ಕೆ ಎರಡನೇ ಅಲೆಯಿಂದ ಸಮಸ್ಯೆಯಿಲ್ಲ ಎಂದು ಹಲವರು ತಪ್ಪು ಭಾವನೆಯಲ್ಲಿದ್ದರು. ಕೊರೊನಾ ಬರೋದಿಲ್ಲ, ನಮ್ಗೆ ರೋಗ ನಿರೋಧಕ ಶಕ್ತಿ ಇದೆ, ಶುಂಠಿ ರಸ ಕುಡಿದರೆ ಯಾವ ರೋಗವೂ ಬರೋದಿಲ್ಲ ಅನ್ನೋ ಭ್ರಮೆಯಲ್ಲಿ ಇರಬಾರದು. ಕೊರೊನಾ ಯುದ್ಧ ಗೆದ್ದೆವು ಅನ್ನೋ ಭ್ರಮೆಯೇ ಎರಡನೇ ಅಲೆಯ ದಾಳಿಗೆ ಕಾರಣವಾಯ್ತು ಎಂದು ವೈರಾಲಜಿಸ್ಟ್ ಡಾ.ರವಿ ಹೇಳಿದರು.
ರಾಜ್ಯದಲ್ಲಿ ಕಳೆದ ಮಾರ್ಚ್‌ನಲ್ಲಿ ಮೊದಲಿಗೆ ಪ್ರಕರಣ ಕಾಣಿಸಿದವು. ಬಳಿಕ ಜೂನ್ನಿಂದ ಡಿಸೆಂಬರ್ವರೆಗೆ ಪೀಕ್ ಲೆವೆಲ್ ಇತ್ತು. ಇದೀಗ ಎರಡರ ನಂತರ ಮೂರನೇ ಅಲೆಯು ಬೆನ್ನ ಹಿಂದೆ ಇದೆ. ಎಚ್ಚರದಿಂದ ಇರಬೇಕು ಎಂದು ಡಾ.ರವಿ ತಿಳಿಸಿದರು.
ಕರ್ನಾಟಕ ಪತ್ರಕರ್ತೆಯರ ಸಂಘದಿಂದ ಕೋವಿಡ್ ಮೂರನೇ ಅಲೆ- ಲಸಿಕೆ- ರಕ್ಷಣೆ ಕುರಿತು ವೆಬಿನಾರ್ ಮಾಧ್ಯಮ ಸಂವಾದ ಆಯೋಜಿಸಿತ್ತು.
ಖ್ಯಾತ ವೈರಾಲಜಿಸ್ಟ್ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ರವಿ ಈ ಕುರಿತು ಮಾತಾನಾಡಿ, ಗೊಂದಲ ನಿವಾರಣೆ ಮಾಡಿದರು. ಕೊರೊನಾ ಹರಡುವಿಕೆಯ ಬಗ್ಗೆ ತಿಳಿದಿದ್ದರೂ, ಜನರು ತಮ್ಮ ನಿರ್ಲಕ್ಷ್ಯ ತೋರಿದ್ದೇ ಎರಡನೇ ಅಲೆಯ ತೀವ್ರತೆಗೆ ಕಾರಣವಾಯ್ತು ಎಂದರು.
ನಿಮ್ಮ ಸುರಕ್ಷತೆ ನಿಮ್ಮ ಜವಾಬ್ದಾರಿ : ನಮ್ಮ ಅಜಾಗರೂಕತೆ, ನಿರ್ಲಕ್ಷ್ಯದಿಂದಲ್ಲೇ ಸೋಂಕು ಹೆಚ್ಚಳವಾಗುತ್ತಿದೆ. ಮಾಸ್ಕ್ ಹಾಕಿದಾಗ ಮಾತ್ರ ಸೋಂಕಿನ ತೀವ್ರತೆ ಕಡಿಮೆ ಆಗಲು ಸಾಧ್ಯ. ನಮ್ಮ ಸುರಕ್ಷತೆ ನಮ್ಮದೇ ಜವಾಬ್ದಾರಿಯಾಗಬೇಕು ಎಂದು ವಿವರಿಸಿದರು.
ಕೊರೊನಾ ವೇಗವಾಗಿ ಹರಡುವಿಕೆಯ ಗುಣ, ವಿವಿಧ ರಾಜ್ಯಗಳು ವಿವಿಧ ಸಮಯದಲ್ಲಿ ದುರ್ಬಲ ಆಗುತ್ತಿರುವುದು, ಸೂಪರ್ ಸ್ಪ್ರೆಡಿಂಗ್ ಕಾರ್ಯಕ್ರಮಗಳು ಅಂದರೆ ಚುನಾವಣೆ, ಪಾರ್ಟಿ, ಮದುವೆ, ಜಾತ್ರೆಗಳು, ಮೇಳಗಳು ಕಾರಣವಾದ್ವು.
ಮುಂದಿನ ದಿನಗಳಲ್ಲಿ ಕೊರೊನಾ ಹೊಸ ಹೊಸ ರೂಪಾಂತರ ಪಡೆಯಲಿದೆ. ಇದನ್ನು ಯಾರೂ ಕೂಡ ತಡೆ ಹಿಡಿಯಲು ಸಾಧ್ಯವಿಲ್ಲ. ಇದರಿಂದ ಪಾರಾಗಬೇಕು ಅಂದರೆ ವ್ಯಾಕಿನೇಷನ್ ಪೂರ್ಣವಾಗಬೇಕು ಹಾಗೂ ವ್ಯಾಕಿನೇಷನ್ ನಂತರವೂ ಕೋವಿಡ್ ನಿಯಮವನ್ನು ಪಾಲಿಸಬೇಕು ಎಂದು ತಿಳಿಸಿದರು.
ವಿಶ್ವದಲ್ಲಿ 5 ರೀತಿಯ ಡೇಂಜರ್ ರೂಪಾಂತರ ತಳಿ
1) B.1.351- ಸೌತ್ ಆಫ್ರಿಕಾ
2)P-1- ಬ್ರೆಸಿಲ್
3)B.1.617- ಮಹಾರಾಷ್ಟ್ರ- ಇಂಡಿಯಾ
4)B.1.427 -ಕ್ಯಾಲಿಫೋರ್ನಿಯಾ, ಯುಎಸ್ಎ
5) B.1.117- ಯುಕೆ
ನಿತ್ಯವೂ ರೂಪಾಂತರಿ ವೈರಸ್ ಪತ್ತೆಯಾಗ್ತಿದ್ದು, ಅದರಲ್ಲಿ 5 ರೂಪಾಂತರಿ ವೈರಸ್ಗೆ ಹೆಚ್ಚು ಕಾಯಿಲೆ ಹರಡುವ ಸಾಧ್ಯತೆ ಇರುತ್ತೆ. ಈ ತಳಿಗಳ ಹರಡುವಿಕೆ ವೇಗ ರೀತಿ ಇರಲಿದ್ದು, ಹೆಚ್ಚು ಪರಿಣಾಮ ಬೀರಲಿದೆ.
ಯುಕೆ ರೂಪಾಂತರಿ ಸೋಂಕು ಶೇ. 30-40ರಷ್ಟು ವೇಗವಾಗಿ ಸೋಂಕು ಹರಡುವ ಸಾಧ್ಯತೆ ಇರಲಿದೆ. ನಮ್ಮ ದೇಶದಲ್ಲೂ ರೂಪಾಂತರಿ ಸೋಂಕು ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿದ್ದು, ಇದೀಗ ದೇಶಕ್ಕೆ ಹರಡಿದೆ.
ಮಹಾರಾಷ್ಟ್ರದ ರೂಪಾಂತರಿ ಸೋಂಕು "52" ದೇಶಗಳಿಗೆ ಹರಡಿದೆ. ಹೀಗಾಗಿ, WHO ರೂಪಾಂತರ ವೈರಸ್ ಎಂದು ಘೋಷಣೆ ಮಾಡಿತ್ತು ಎಂದು ಡಾ.ರವಿ ವಿವರಿಸಿದರು.
ಮುಂದೆಯು ರೂಪಾಂತರ ಸೋಂಕು ಬರಲಿದೆ. ಇದಕ್ಕೆ ಎಲ್ಲರೂ ಮಾನಸಿಕವಾಗಿ ಸಿದ್ಧರಾಗಿ ಇರಬೇಕು. ಆದಷ್ಟು ಬೇಗ ಲಸಿಕೆಯನ್ನ ಹಾಕಿಸಿಕೊಂಡರೆ ಮುಂದಿನ ತೀವ್ರತೆ ಕಡಿಮೆ ಮಾಡಬಹುದು ಎಂದು ತಿಳಿಸಿದರು.