ಬೆಂಗಳೂರು: ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಯುವತಿ ಮೇಲೆ ಸಾಮೂಹಿಕ ಆತ್ಯಾಚಾರದ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬಾಂಗ್ಲಾದೇಶ ಪೊಲೀಸರು, ಮಾನವ ಕಳ್ಳಸಾಗಣೆಯಲ್ಲಿ ತೊಡಗಿದ್ದ ನಾಲ್ವರು ದಂಧೆಕೋರರನ್ನು ಬಂಧಿಸಿದ್ದಾರೆ.
ಬಾಂಗ್ಲಾ ಮೂಲದ ಆಶ್ರಫುಲ್ ಮಂಡಲ್ ಅಲಿಯಾಸ್ ಬಾಸ್ ರಫೀಕ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳು ಹಲವು ವರ್ಷಗಳಿಂದ ಭಾರತ ಸೇರಿ ಇನ್ನಿತರ ದೇಶಗಳಿಗೆ ಅಕ್ರಮವಾಗಿ ಮಾನವ ಕಳ್ಳಸಾಗಣಿಕೆಯಲ್ಲಿ ತೊಡಗಿಸಿಕೊಂಡಿದ್ದರು. ರಾಮಮೂರ್ತಿ ನಗರ ಠಾಣೆಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಗರ ಪೊಲೀಸರಿಂದ ಬಂಧನಕ್ಕೊಳಗಾದ ಆರೋಪಿ ರಿದಯ್ ಬಾಬು ಜೊತೆ ಸೇರಿಕೊಂಡು ಇದುವರೆಗೂ ಸುಮಾರು 50 ಯುವತಿಯರನ್ನು ಮಾನವ ಕಳ್ಳಸಾಗಣಿಕೆ ದಂಧೆಯಲ್ಲಿ ತೊಡಗಿಸಿದ್ದ ವಿಚಾರ ಬಯಲಿಗೆ ಬಂದಿದೆ.
ಸಲೂನ್ ಹಾಗೂ ಸ್ಟೋರ್ಗಳಲ್ಲಿ ಕೆಲಸ ಕೊಡಿಸುವುದಾಗಿ ಬಾಂಗ್ಲಾ ಯುವತಿಯರನ್ನು ನಂಬಿಸಿ ಭಾರತಕ್ಕೆ ಕರೆತರುತ್ತಿದ್ದರು. ಅವರ ಗಮನಕ್ಕೆ ಬರದಂತೆ ಡ್ರಗ್ಸ್ ಸೇವಿಸುವಂತೆ ಮಾಡಿ ವಿವಿಧ ಭಂಗಿಯ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಇದನ್ನಿಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ವೇಶ್ಯಾವಾಟಿಕೆ ದಂಧೆಗೆ ನೂಕುತ್ತಿದ್ದರು.
ಬಾಂಗ್ಲಾ ಆರೋಪಿಗೂ ಬೆಂಗಳೂರಿಗಿದೆ ನಂಟು
ಭಾರತ, ಪಾಕಿಸ್ತಾನ ಹಾಗೂ ಮಧ್ಯ ಪ್ರಾಚ್ಯ ದೇಶಗಳಿಗೆ ಯುವತಿಯರನ್ನು ಸೆಳೆದು ಕೆಲಸ ಕೊಡಿಸುವ ಸೋಗಿನಲ್ಲಿ ಅವ್ಯಾವಹತವಾಗಿ ಮಾನವ ಕಳ್ಳಸಾಗಣಿಕೆ ಜಾಲದಲ್ಲಿ ತೊಡಗಿಸಿಕೊಂಡಿದ್ದರು. ಪ್ರಮುಖವಾಗಿ ರಫೀಕ್ ಕಳೆದ 10 ವರ್ಷಗಳಿಂದಲೂ ಈ ದಂಧೆಯಲ್ಲಿ ಭಾಗಿಯಾಗಿ ಸುಮಾರು 500ಕ್ಕೂ ಹೆಚ್ಚು ಜನರನ್ನು ಸಾಗಣಿಕೆ ಮಾಡಿದ್ದ.
ರಫೀಕ್ ಎಂಟು ವರ್ಷಗಳಿಂದಲೂ ಬೆಂಗಳೂರಿನ ನಂಟು ಬೆಳೆಸಿಕೊಂಡಿದ್ದು ಚಾಲಕನಾಗಿ ಹಾಗೂ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿದ್ದ. ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತ ಯುವತಿಯನ್ನು ಕಳೆದ ಅಕ್ಟೋಬರ್ನಲ್ಲಿ ಬೆಂಗಳೂರಿಗೆ ಕರೆತರಲಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಬಾಂಗ್ಲಾ ಮಾಧ್ಯಮಗಳಲ್ಲಿ ವರದಿಯಾಗಿದೆ.