ಬೆಂಗಳೂರು: ಕಾವಲ್ ಬೈರಸಂದ್ರ ಗಲಭೆ ಪ್ರಕರಣ ಹಿನ್ನೆಲೆ ಏನು, ಏಕೆ ಹೀಗಾಯ್ತು, ಹಿಂದೆ ಯಾರಿದ್ದಾರೆ, ರಾಜಕೀಯ ಲೇಪನ ಇದೆಯಾ ಈ ಎಲ್ಲದರ ಬಗ್ಗೆ ಇಂದು ಸುದೀರ್ಘ ಚರ್ಚೆ ನಡೆದಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಸಭೆಯ ನಂತರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಹಿಂದೆ ಗೃಹ ಸಚಿವರಾಗಿ ಕೆಲಸ ಮಾಡಿದ್ದವರನ್ನು ಸೇರಿಸಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸತ್ಯಶೋಧನಾ ಸಮಿತಿ ರಚಿಸಿದ್ದಾರೆ. ನನಗೆ ಸಮಿತಿಯ ಜವಾಬ್ದಾರಿ ಕೊಟ್ಟಿದ್ದಾರೆ. ಇವತ್ತು ಮೊದಲ ಸಭೆ ನಡೆಸಿದ್ವಿ. ಕೆಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಇನ್ನು ಕೂಡ ಆಳವಾದ ಅಧ್ಯಯನ ಮಾಡಬೇಕು ಎಂದು ಹೇಳಿದರು.
ಅಲ್ಲಿನ ಜನರನ್ನು ವಿಚಾರಿಸಬೇಕಿದೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಜೊತೆ ಮಾತನಾಡಿದ್ದೇನೆ. ಕರ್ಫ್ಯೂ ಹಾಕಿದ್ದೇವೆ ಈಗ ಬರೋದು ಬೇಡ ಅಂದಿದ್ದಾರೆ. ಶನಿವಾರ ಬರಲು ಹೇಳಿದ್ದಾರೆ. ವರದಿ ಕೊಡಲು ನಮಗೆ ಸಮಯ ನಿಗದಿ ಪಡಿಸಿಲ್ಲ. ಆದಷ್ಟು ಬೇಗ ವರದಿ ಕೊಡ್ತೀವಿ. ಎಲ್ಲವನ್ನು ಮೀರಿ ಈ ಘಟನೆಯನ್ನು ನೋಡಬೇಕು. ಇಂತಹ ಘಟನೆ ನಡೆದಾಗ ರಾಜಕೀಯ ದೂರ ಉಳಿದ್ರೆ ಒಳ್ಳೆಯದು ಎಂದರು.
ನಮಗೂ ರಾಜಕೀಯ ಮಾಡೋದಕ್ಕೆ ಬರುತ್ತೆ. ಆದರೆ ಇಂತಹ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಇಲ್ಲಿ ರಾಜಕೀಯ ಮರೆತು ಎಲ್ಲರೂ ಒಂದಾಗಿ ತನಿಖೆಗೆ ಸಹಕಾರ ನೀಡಬೇಕಿದೆ. ರಾಜಕೀಯ ರಹಿತವಾದ ತನಿಖೆ ನಡೆದರೆ ಮಾತ್ರ ಸತ್ಯ ಹೊರಬರಲು ಸಾಧ್ಯ. ಇದೇ ನಿಟ್ಟಿನಲ್ಲಿ ತನಿಖೆಯನ್ನು ನಾವು ನಿರೀಕ್ಷಿಸಿದ್ದೇವೆ ಎಂದರು.
ಎಸ್ಡಿಪಿಐ, ಪಿಎಫ್ಐ ನಿಷೇಧ ವಿಚಾರ ಮಾತನಾಡಿ, ಎಲ್ಲವೂ ಹೊರಗೆ ಬಂದ ನಂತರ ತೀರ್ಮಾನ ಮಾಡುತ್ತಾರೆ. ಯಾರ್ಯಾರು ಭಾಗಿಯಾಗಿದ್ದಾರೆ ಅನ್ನೋದು ತನಿಖೆಯ ನಂತರ ಗೊತ್ತಾಗುತ್ತೆ ಎಂದು ವಿವರಿಸಿದರು.