ಬೆಂಗಳೂರು: ಪಕ್ಷದ ಹಿತದೃಷ್ಟಿಯಿಂದ ಆದಷ್ಟು ಬೇಗ ಕೆಪಿಸಿಸಿಗೆ ಅಧ್ಯಕ್ಷರನ್ನ ನೇಮಕ ಮಾಡ್ಬೇಕು ಎಂದು ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಅಭಿಪ್ರಾಯಪಟ್ಟಿದ್ದಾರೆ.
ಹೈಕಮಾಂಡ್ ವೀಕ್ಷಕರನ್ನ ಕಳಿಸಿದ್ದು, ಅವರಿಗೆ ಕಾಂಗ್ರೆಸ್ನ ಎಲ್ಲಾ ನಾಯಕರು ಅಭಿಪ್ರಾಯ ತಿಳಿಸಿದ್ದಾರೆ. ಅದರ ಆಧಾರದ ಮೇಲೆ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಹೈಕಮಾಂಡ್ ಯಾರನ್ನ ಆರಿಸುತ್ತೋ ಅವರನ್ನ ನಾವು ಒಪ್ಪಿಕೊಂಡು ಕೆಲಸ ಮಾಡ್ತೇವೆ. ದೆಹಲಿ ಚುನಾವಣೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಸೋನಿಯಾ ಗಾಂಧಿ ಬ್ಯುಜಿಯಾಗಿದ್ದಾರೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ವಿಳಂಬ ಆಗಿರಬಹುದು ಎಂದರು. ಕಾರ್ಯಾಧ್ಯಕ್ಷ ಹುದ್ದೆ ಸಾಮಾನ್ಯವಾಗಿ ಒಂದು, ಎರಡು ಇರುತ್ತೆ. ಈಗಲೂ ಒಬ್ಬರು ಕಾರ್ಯಾಧ್ಯಕ್ಷರು ಇದ್ದಾರೆ. ಪಕ್ಷಕ್ಕೆ ಅಧ್ಯಕ್ಷರು ಮುಖ್ಯ, ಅಧ್ಯಕ್ಷರಿಗೆ ಸಹಾಯ ಮಾಡಲಿ ಅಂತಾ ಕಾರ್ಯಾಧ್ಯಕ್ಷರ ನೇಮಕ ಮಾಡಲಾಗುತ್ತೆ. ಕಾರ್ಯಾಧ್ಯಕ್ಷ ಹುದ್ದೆ ನೇಮಕಕ್ಕೆ ನಮ್ಮ ಅಭ್ಯಂತರ ಇಲ್ಲ. ನಾಲ್ಕೈದು ಕಾರ್ಯಾಧ್ಯಕ್ಷರ ನೇಮಕ ಮಾಡಿ ಅಂತಾ ಸಿದ್ದರಾಮಯ್ಯ ಹೇಳಿದ್ರೆ, ಅದು ಅವರ ಅಭಿಪ್ರಾಯ ಎಂದರು.
ಅಧಿಕಾರ ಹಂಚಿಕೆ ಮಾಡಿಕೊಂಡು ಕೆಲಸ ಮಾಡೋದು ಆರೋಗ್ಯಕರ. ಸಾಕಷ್ಟು ಹಿರಿಯ ನಾಯಕರಿದ್ದಾರೆ. ಅಧಿಕಾರ ಹಂಚಿಕೆ ಆದ್ರೆ ಎಲ್ಲಾ ಹಿರಿಯರಿಗೂ ಅವಕಾಶ ಕೊಡಲು ಸಾಧ್ಯ ಆಗದಿದ್ರೂ ಅಧಿಕಾರ ಹಂಚಿಕೆಯಿಂದ ಕೆಲವರಿಗಾದ್ರೂ ಅವಕಾಶ ಸಿಗುತ್ತೆ. ಆದಷ್ಟು ಬೇಗ ಎಲ್ಲಾ ಗೊಂದಲಗಳನ್ನ ವೇಣುಗೋಪಾಲ್ ಅವರು ಬಗೆಹರಿಸಬೇಕು. ತಡ ಆದಷ್ಟು ಗೊಂದಲಗಳು ಹೆಚ್ಚಾಗುತ್ತವೆ. ನಾನು ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ. ಹಲವು ನಾಯಕರು ನನ್ನ ಹೆಸರನ್ನ ಪ್ರಸ್ತಾಪ ಮಾಡಿದ್ದಾರೆ. ಹೈಕಮಾಂಡ್ ಮುಂದೆ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ಮ ಉದ್ದೇಶ ಪಕ್ಷ ಸಂಘಟಿತವಾಗಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು ಎಂದು ಹೇಳಿದರು.
ವಲಸಿಗ, ಮೂಲ ಕಾಂಗ್ರೆಸ್ ಅಸಮಾಧಾನ ವಿಚಾರದ ಬಗ್ಗೆ ಮಾತನಾಡಿ, ಪಕ್ಷಕ್ಕೆ ಬಂದ ಮೇಲೆ ತಾರತಮ್ಯ ಇರಬಾರದು. ಸಿದ್ದರಾಮಯ್ಯ ಕಾಂಗ್ರೆಸ್ಗೆ ಬಂದು 14 ವರ್ಷ ಆಯ್ತು. ಬಂದ ನಂತರ ಅವರಿಗೆ ಎಲ್ಲಾ ಜವಾಬ್ದಾರಿ ಕೊಟ್ಟಿದ್ದೇವೆ. ಪಕ್ಷದಲ್ಲಿ 40 ವರ್ಷ ಇದ್ದವರೂ ಇದ್ದಾರೆ. ಖರ್ಗೆ, ಹೆಚ್ಕೆಪಿ, ಹರಿಪ್ರಸಾದ್, ನಾನು ಎಲ್ಲರೂ ಇದ್ದೇವೆ. ಹೊಸಬರು, ಹಳಬರು ಎಂಬ ಭೇದ ಭಾವ ಬರಬಾರದು. ಪಕ್ಷದಲ್ಲಿ ಶಿಸ್ತಿನಿಂದ ಇರುವವರೂ ಇದ್ದಾರೆ. ಅಧಿಕಾರ ಇಲ್ಲದಿದ್ದರೂ ಪಕ್ಷ ಬಿಟ್ಟು ಹೋಗಿಲ್ಲ. ಎಲ್ಲರೂ ಸರಿಯಾಗಿ ನಡೆದುಕೊಂಡ್ರೆ ಈ ಅಸಮಾಧಾನ ಬರಲ್ಲ ಎಂದು ವಿವರಿಸಿದರು.