ಬೆಂಗಳೂರು: ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಸಿ.ಆರ್.ಮನೋಹರ್ ಹಾಗೂ ಬಿಜೆಪಿ ಮಾಜಿ ಶಾಸಕ ಎ.ನಾಗರಾಜು ತಮ್ಮ ಬೆಂಬಲಿಗರೊಂದಿಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
ಕಳೆದ ಸೋಮವಾರ ಜೆಡಿಎಸ್ ಪಕ್ಷದ ಸದಸ್ಯತ್ವ ಹಾಗೂ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದ ಕೋಲಾರ ಭಾಗದ ನಾಯಕ ಸಿ.ಆರ್.ಮನೋಹರ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು. ಮಾಲೂರು ಮಾಜಿ ಶಾಸಕ ಎ. ನಾಗರಾಜು ಸಹ ಇದೇ ಸಂದರ್ಭ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾದರು.
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮಾತನಾಡಿ, ಕೋಲಾರ ಭಾಗದ ಹಲವು ನಾಯಕರು ಬೇಷರತ್ತಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಮಾಜಿ ಶಾಸಕರಾದ ಆರ್.ಮನೋಹರ ಹಾಗೂ ಎ. ನಾಗರಾಜು ಸೇರಿದಂತೆ ಹಲವರು ಕಾಂಗ್ರೆಸ್ ಸೇರಿದ್ದಾರೆ. ಇವರೆಲ್ಲರೂ ಜೆಡಿಎಸ್ ಹಾಗೂ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟು ಬಂದಿದ್ದಾರೆ. ಇವರ ಸೇರ್ಪಡೆ ಮಾಹಿತಿಯನ್ನು ಕಾಂಗ್ರೆಸ್ ಪಕ್ಷ ಹೈಕಮಾಂಡ್‌ಗೆ ನೀಡಿತ್ತು. ಅವರ ಸಮ್ಮತಿ ಪಡೆದು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಮನೋಹರ್ ಕಳೆದ ಅವಧಿಯಲ್ಲಿ ಜೆಡಿಎಸ್ನಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಆದರೆ ಈ ಸಾರಿ ಅವರನ್ನು ಪಕ್ಷ ನಿರ್ಲಕ್ಷಿಸಿತ್ತು. ಅಲ್ಲದೆ ಸಾಕಷ್ಟು ಜನರಿಗೆ ಬಹುದಿನಗಳಿಂದ ನಾವು ಗಾಳ ಹಾಕಿದ್ದೆವು. ಇಂದು ಸರ್ವ ಸಮ್ಮತಿಯಿಂದ ಎಲ್ಲಾ ನಾಯಕರು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ ಎಂದರು.
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ:
ಇದೇ ವೇಳೆ, ಮೇಕೆದಾಟು ಯೋಜನೆಗೆ ಆಗ್ರಹಿಸಿ ಹೋರಾಟ ಮಾಡಲಿದ್ದೇವೆ. ಜನವರಿ ಮೊದಲ ವಾರದಲ್ಲಿ ಪಾದಯಾತ್ರೆ ನಡೆಯಲಿದೆ. ಕೇವಲ ಕಾವೇರಿ ಕೊಳ್ಳದವರು ಇದರಲ್ಲಿ ಭಾಗವಹಿಸುವುದಲ್ಲ. ಕೋಲಾರ,ತುಮಕೂರು ಸೇರಿ ಎಲ್ಲರು ಭಾಗಿಯಾಗಬೇಕು. ಈ ಹೋರಾಟವನ್ನ ಯಶಸ್ವಿಗೊಳಿಸಬೇಕು ಎಂದು ಡಿಕೆಶಿ ಕರೆಕೊಟ್ಟರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಎಲ್ಲ ಮುಖಂಡರು ಜೆಡಿಎಸ್ ಹಾಗು ಬಿಜೆಪಿಯನ್ನು ತೊರೆದು ಬೇಷರತ್ತಾಗಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ನಾಗರಾಜು ಬಹಳ ವರ್ಷ ಕಾಂಗ್ರೆಸ್‌ನಲ್ಲಿ ಇದ್ದರೂ. ಕಾರಣಾಂತರಗಳಿಂದ ಬಿಜೆಪಿಗೆ ಹೋಗಿದ್ದರು. ಈಗ ಮತ್ತೆ ಕಾಂಗ್ರೆಸ್ಸಿಗೆ ವಾಪಸಾಗಿದ್ದಾರೆ. ಈ ಸೇರ್ಪಡೆಯನ್ನು ಗಮನಿಸಿದಾಗ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ ಎನ್ನುವುದು ಸಾಬೀತಾಗಿದೆ. ಎಲ್ಲ ಜಾತಿ ಜನಾಂಗದವರು ಒಟ್ಟಾಗಿಸಿಕೊಂಡಿರುವ ಯುವ ಪಕ್ಷ ಕಾಂಗ್ರೆಸ್ ಮಾತ್ರ. ಬಿಜೆಪಿ ಕೇವಲ ಕೋಮುವಾದಿ ಪಕ್ಷ. ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುವವರು. ಸಂವಿಧಾನದಲ್ಲಿ ಧರ್ಮಾಧಾರಿತ ರಾಜಕೀಯ ವ್ಯವಸ್ಥೆ ಇಲ್ಲ. ಜಾತ್ಯಾತೀತ ರಾಷ್ಟ್ರ ನಿರ್ಮಾಣ ಮಾಡಬೇಕು ಎನ್ನುವುದು ಸಂವಿಧಾನದಲ್ಲಿ ತಿಳಿಸಲಾಗಿದೆ. ಎಲ್ಲರನ್ನೂ ಸಮಾನವಾಗಿರುವ ಸಮಾಜವನ್ನು ನಿರ್ಮಿಸಬೇಕೆಂಬುದು ಸಂವಿಧಾನದ ಆಶಯವಾಗಿದ್ದು ಅಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಹೇಳಿದರು.