ಬೆಂಗಳೂರು: ಮಾತೃಪೂರ್ಣ ಯೋಜನೆಯಡಿ ಮೊಟ್ಟೆ ವಿತರಿಸುವ ಟೆಂಡರ್ನಲ್ಲಿ ಕಿಕ್ ಬ್ಯಾಕ್ ಪಡೆದ ಆರೋಪ ಹೊತ್ತಿರುವ ಸಚಿವೆ ಶಶಿಕಲಾ ಜೊಲ್ಲೆ ರಾಜೀನಾಮೆಗೆ ಮಾಜಿ ಸಚಿವೆ ಉಮಾಶ್ರೀ ಆಗ್ರಹಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗರ್ಭಿಣಿಯರು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯಕ್ಕಾಗಿ ಮಾತೃಪೂರ್ಣ ಯೋಜನೆಯಡಿ ಮೊಟ್ಟೆ ವಿತರಿಸುವ ಯೋಜನೆಯ ಟೆಂಡರ್ನಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅಕ್ರಮ ಮಾಡಿದ್ದಾರೆ ಎಂಬ ಆರೋಪವಿದೆ. 2016-17ರಲ್ಲಿ ಜಾರಿಗೆ ಬಂದ ಯೋಜನೆಯ ನಿಜವಾದ ಉದ್ದೇಶ ಇಂತಹದೊಂದು ಅಕ್ರಮಕ್ಕೆ ಸಿಲುಕಿ ಅರ್ಥ ಕಳೆದುಕೊಂಡಿದೆ. ಮಕ್ಕಳ ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂಬ ಕಾರಣಕ್ಕಾಗಿ ಈ ಯೋಜನೆ ಜಾರಿಗೆ ತರಲಾಗಿತ್ತು. ಆದರೆ, ಇಂತಹ ಮಹತ್ವದ ಯೋಜನೆಯಲ್ಲಿ ಅಕ್ರಮ ನಡೆದಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಅಭಿಪ್ರಾಯಪಟ್ಟರು.
ಒಬ್ಬ ಮಹಿಳೆಯಾಗಿ, ಮಹಿಳಾ ಮತ್ತು ಮಕ್ಕಳಿಗೆ ಇಂತಹದೊಂದು ಅನ್ಯಾಯ ಮಾಡುವುದು ಸರಿಯಲ್ಲ. ಇದು ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಮಾಡಿದ ಅನ್ಯಾಯ. ಯೋಜನೆ ಮೂಲಕ ಅಕ್ರಮವಾಗಿ ಹಣ ಪಡೆಯಲು ಶಶಿಕಲಾ ಜೊಲ್ಲೆ ಮುಂದಾಗಿದ್ದಾರೆ ಎಂಬ ಮಾಹಿತಿಯಿದೆ. ಗರ್ಭಿಣಿಯರು ರಕ್ತಹೀನತೆಯಿಂದ ಸಾಯುವ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ಗಮನಿಸಿ ನಮ್ಮ ಸರ್ಕಾರ ಒಂದು ಮಹತ್ವದ ಯೋಜನೆಯನ್ನು ಜಾರಿಗೆ ತಂದಿತ್ತು. ಇದೀಗ ಈ ಯೋಜನೆಯಲ್ಲಿ ಅಕ್ರಮ ನಡೆದಿರುವುದು ವಿಪರ್ಯಾಸ ಎಂದರು.
ಇಂತಹ ಯೋಜನೆ ಜಾರಿಯನ್ನು ಯಾವುದೇ ರೀತಿಯಲ್ಲೂ ಟೆಂಡರ್ ಇಲ್ಲವೆ ಕಂಟ್ರಾಕ್ಟರ್ ಮೂಲಕ ಮಾಡಬಾರದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ರಾಜ್ಯಸರ್ಕಾರದಿಂದ ಆದೇಶ ಉಲ್ಲಂಘನೆಯಾಗಿದೆ. ಇಂತಹದೊಂದು ಅಕ್ರಮದಲ್ಲಿ ಭಾಗಿಯಾಗಿರುವ ಸಚಿವೆ ಜೊಲ್ಲೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಮಾತನಾಡಿ, ಮಹಿಳೆಯರ ವಿಚಾರದಲ್ಲಿ ಒಬ್ಬ ಮಹಿಳೆಯೇ ನಡೆಸಿರುವ ಅಕ್ರಮ ಇದಾಗಿದೆ. ಗರ್ಭಿಣಿ ಹಾಗೂ ಮಕ್ಕಳಿಗೆ ಪೌಷ್ಟಿಕತೆ ಕೊರತೆ ಆಗಬಾರದೆಂದು ನೀಡುವ ಆಹಾರದಲ್ಲಿ ಅಕ್ರಮ ಎಸಗಲು ಮುಂದಾಗಿರುವ ಸಚಿವೆ ಶಶಿಕಲಾ ಜೊಲ್ಲೆ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ಗರ್ಭಿಣಿ ಸಾವು ಹಾಗೂ ಪೌಷ್ಟಿಕತೆ ಕೊರತೆಯಿಂದ ಮಕ್ಕಳ ಸಾವು ಸಾಕಷ್ಟು ಸಂಭವಿಸುತ್ತಿರುವ ಸಂದರ್ಭದಲ್ಲಿ ಇವರ ರಕ್ಷಣೆಗೆ ಧಾವಿಸಬೇಕಾದ ಸಚಿವೆ ಅಕ್ರಮದಲ್ಲಿ ನಿರತರಾಗಿರುವುದು ನಿಜಕ್ಕೂ ಬೇಸರದ ಸಂಗತಿ. ಅವರು ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯಲು ಅರ್ಹರಲ್ಲ ಎಂದರು.
ಇದನ್ನೂ ಓದಿ: ಗರ್ಭಿಣಿಯನ್ನು 8 ಕಿ.ಮೀ.ವರೆಗೆ ಹೊತ್ತು ಸಾಗಿದ ಗ್ರಾಮಸ್ಥರು - ವಿಡಿಯೋ