ಐಎಎಸ್ , ಐಪಿಎಸ್ನಂತ ದೊಡ್ಡ ಹುದ್ದೆಯಲ್ಲಿರುವ ಅಧಿಕಾರಿಗಳು, ಸ್ಟಾರ್ ಸೆಲಬ್ರಿಟಿ ಅನ್ನೋ ಪಟ್ಟ ಇದ್ರೂ ಕೂಡಾ ಕೆಲವರಿಗೆ ಖಾದಿ ಸೆಳೆತ ಮಾತ್ರ ಬಿಟ್ಟಿಲ್ಲ. ಸಿನಿಮಾ ರಂಗದಲ್ಲಿ ಹಾಗೂ ಇತರ ಕ್ಷೇತ್ರಗಳಲ್ಲಿ ಹೆಸರು ಮಾಡಿದ ಎಷ್ಟೋ ಗಣ್ಯರು ರಾಜಕೀಯಕ್ಕೆ ಬಂದು ಹೋಗಿದ್ದಾರೆ. ಕೆಲವರು ರಾಜಕೀಯದಲ್ಲೇ ನೆಲೆ ಕಂಡುಕೊಂಡಿದ್ದಾರೆ.
ಕೆಲವರು ನಿವೃತ್ತಿ ನಂತರ ರಾಜಕೀಯಕ್ಕೆ ಬಂದರೆ ಮತ್ತೆ ಕೆಲವರು ಸರ್ಕಾರಿ ಕೆಲಸ ಇದ್ದರೂ ಅರ್ಧದಲ್ಲೇ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯ ಅಖಾಡಕ್ಕೆ ಧುಮುಕುತ್ತಿದ್ದಾರೆ. ಇದರಲ್ಲಿ ಕೆಲವರಿಗೆ ಸಕ್ಸಸ್ ದೊರೆತರೆ, ಮತ್ತೆ ಕೆಲವರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ರಾಜಕೀಯದ ಸಹವಾಸವೇ ಬೇಡ ಎಂದು ವಾಪಸ್ ತೆರಳಿದ್ದಾರೆ. ಆದರೆ ಉನ್ನತ ಹುದ್ದೆ, ಸ್ಟಾರ್ ಪಟ್ಟ ಇದ್ದರೂ ಕೆಲವರಿಗೆ ರಾಜಕೀಯದ ವ್ಯಾಮೋಹ ಏಕೆ ಎಂಬುದು ಇತ್ತೀಚೆಗೆ ಚರ್ಚೆಯಲ್ಲಿರುವ ವಿಚಾರವಾಗಿದೆ. ಈ ವಿಚಾರವಾಗಿ ಮಾಜಿ ಐಎಎಸ್ ಅಧಿಕಾರಿ ಹಾಗೂ ನಟ ಕೆ. ಶಿವರಾಮು ಈಟಿವಿ ಭಾರತದ ಜೊತೆ ಮುಕ್ತವಾಗಿ ಮಾತಾನಾಡಿದ್ದಾರೆ.
'ರಾಜಕೀಯ ಎಂಬುದು ಜನಸೇವೆ ಮಾಡಲು ಒಂದು ಮುಕ್ತ ವೇದಿಕೆ. ಅಲ್ಲಿ ಅಧಿಕಾರ ಸಿಕ್ಕರೆ ಜನರ ಸೇವೆ ಮಾಡುವ ಅವಕಾಶ ಹೆಚ್ಚು ದೊರೆಯುತ್ತದೆ. ರಾಜಕೀಯಕ್ಕೆ ಬಂದವರಿಗೆಲ್ಲಾ ಅಧಿಕಾರ ಸಿಗುತ್ತೆ ಅಂತ ಹೇಳೋಕೆ ಸಾಧ್ಯವಿಲ್ಲ. ರಾಜಕೀಯದಲ್ಲಿ ಇದ್ದವರಿಗೆಲ್ಲಾ ಜನ ಸೇವೆ ಮಾಡುವ ಭಾಗ್ಯ ಸಿಗುವುದಿಲ್ಲ. ಮುಖ್ಯಮಂತ್ರಿಯಂತ ಹುದ್ದೆ ಸಿಕ್ಕರೆ ಮಾತ್ರ ಅದು ಸಾಧ್ಯ' ಎಂದು ಕೆ. ಶಿವರಾಮು ಅಭಿಪ್ರಾಯ ವ್ಯಕ್ತಪಡಿಸಿದರು.
ಸಿನಿಮಾ, ಹಾಗೂ ವೃತ್ತಿಯಿಂದ ನಿವೃತ್ತನಾದ ನಂತರ ಮನೆಯಲ್ಲಿ ಸುಮ್ಮನೆ ಕೂರುವ ಬದಲು ಜನರ ಸೇವೆ ಮಾಡುವ ಉದ್ದೇಶದಿಂದ ನಾನು ರಾಜಕೀಯಕ್ಕೆ ಬಂದೆ ಎಂದು ಕೆ. ಶಿವರಾಮು ಹೇಳಿದ್ದಾರೆ.