ಬೆಂಗಳೂರು: ಈ ಬಾರಿ ನಾಡಹಬ್ಬ ದಸರಾ ಉತ್ಸವದ ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಒಪ್ಪಿಗೆ ಸೂಚಿಸಿದ್ದಾರೆ. ಅ.7 ರಂದು ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಸರಳ ದಸರಾ ಉತ್ಸವಕ್ಕೆ ಚಾಲನೆ ಸಿಗಲಿದೆ.
ಅ.7ರಿಂದ ಆರಂಭವಾಗಲಿರುವ ನಾಡಹಬ್ಬ ದಸರಾ ಮಹೋತ್ಸವವನ್ನು ಉದ್ಘಾಟಿಸಲು ಹಿರಿಯ ಮುತ್ಸದ್ಧಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರಿಗೆ ಆಹ್ವಾನ ನೀಡಲು ಹಾಗು ದಸರಾ ಹಬ್ಬದ ಸಿದ್ಧತೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಅದರಂತೆ ದಸರಾ ಉದ್ಘಾಟಿಸಲು ಒಪ್ಪಿಗೆ ನೀಡುವಂತೆ ಸರ್ಕಾರದಿಂದ ಪ್ರಸ್ತಾವನೆ ಕಳುಹಿಸಲಾಗಿದ್ದು, ಇದಕ್ಕೆ ಎಸ್.ಎಂ.ಕೃಷ್ಣ ಒಪ್ಪಿಗೆ ಸೂಚಿಸಿದ್ದಾರೆ.
ಈ ಬಾರಿಯ ದಸರಾ ಉತ್ಸವ ಉದ್ಘಾಟನೆ ಮತ್ತು ಚಾಮುಂಡೇಶ್ವರಿ ಪೂಜೆ ಸಲ್ಲಿಕೆಗೆ ಒಪ್ಪಿಕೊಂಡ ಕೃಷ್ಣಗೆ ಸಿಎಂ ಬಸವರಾಜ ಬೊಮ್ಮಾಯಿ ಧನ್ಯವಾದ ಸಲ್ಲಿಸಿದ್ದಾರೆ. ಈ ಕುರಿತು ಎಸ್.ಎಂ.ಕೃಷ್ಣ ಅವರಿಗೆ ಪತ್ರ ಬರೆದಿರುವ ಸಿಎಂ, ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಯನ್ನು ನೆರವೇರಿಸಲು ಆಮಂತ್ರಣವನ್ನು ತಾವು ಒಪ್ಪಿಕೊಂಡಿರುವುದಕ್ಕೆ ಸರ್ಕಾರದ ಪರವಾಗಿ ತಮಗೆ ಧನ್ಯವಾದಗಳನ್ನು ತಿಳಿಸಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಾಡಹಬ್ಬ ಮೈಸೂರು ದಸರಾ ಉದ್ಘಾಟಕರ ಹೆಸರು ಘೋಷಿಸಿದ ಸಿಎಂ ಬೊಮ್ಮಾಯಿ..