ಬೆಂಗಳೂರು : ಕೇಂದ್ರ ಸರ್ಕಾರ ಎಪಿಎಂಸಿಗಳನ್ನು ವ್ಯವಸ್ಥಿತವಾಗಿ ಮುಚ್ಚುವ ಕಾರ್ಯ ಮಾಡುತ್ತಿದೆ. ಇದು ರೈತರನ್ನು ಒಕ್ಕಲೆಬ್ಬಿಸುವ ತಂತ್ರ. ಕೇಂದ್ರ ವಾಪಸ್ ಪಡೆದ ಕಾಯ್ದೆಗಳನ್ನು ರಾಜ್ಯದಲ್ಲಿ ಹಿಂತೆಗೆದುಕೊಂಡಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಕ್ಕಿ, ಗೋಧಿ, ರಾಗಿಗೆ ನೀಡಲಾಗುತ್ತಿದ್ದ ಬೆಂಬಲ ಬೆಲೆಯನ್ನು ಕಡಿಮೆ ಮಾಡಲಾಗಿದೆ. ರೈತರು ಬೆಳೆಯುವ ಬೆಳೆ ಹೆಚ್ಚಾಗುತ್ತಿದ್ದು, ಖರೀದಿ ಪ್ರಮಾಣ ಕಡಿಮೆ ಆಗುತ್ತಿದೆ. ಹಂತ ಹಂತವಾಗಿ ಎಪಿಎಂಸಿಗಳನ್ನು ಮುಚ್ಚಲಾಗುತ್ತಿದೆ ಎಂದು ದೂರಿದರು.
ಎಪಿಎಂಸಿ ಕಾಯ್ದೆ, ಭೂ ಸ್ವಾಧೀನ ತಿದ್ದುಪಡಿ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಈ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆದರೂ ರಾಜ್ಯ ಸರ್ಕಾರ ಹಿಂತೆದುಕೊಂಡಿಲ್ಲ. ಇದರಿಂದ ರಾಜ್ಯದ ರೈತರಿಗೆ ಸರ್ಕಾರ ಕಂಟಕವಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಬೊಮ್ಮಾಯಿ ಸಿಎಂ ಆಗಿ 6 ತಿಂಗಳು ಪೂರ್ಣವಾಗಿದೆ. ಯಡಿಯೂರಪ್ಪ ಸರ್ಕಾರದ ಭಾಗವೇ ಬೊಮ್ಮಾಯಿ ಸರ್ಕಾರ. ಬೊಮ್ಮಾಯಿ ಹಿಂದೆ ಗೃಹ ಸಚಿವರಾಗಿದ್ದರು. ಈಗ ಸಿಎಂ ಆಗಿದ್ದಾರೆ. ಇವರ ಸರ್ಕಾರವೇನು ಹೊಸದಲ್ಲ. 2018ರಲ್ಲಿ ಬಿಜೆಪಿ ಪ್ರಣಾಳಿಕೆ ರಿಲೀಸ್ ಮಾಡಿತ್ತು. ಅದೇ ಪ್ರಣಾಳಿಕೆ ಯಡಿಯೂರಪ್ಪ, ಬೊಮ್ಮಾಯಿಗೆ ಅನ್ವಯ. ಆ ಪ್ರಣಾಳಿಕೆಯಂತೆಯೇ ಇವರು ನಡೆಯಬೇಕು ಎಂದರು.
ಭ್ರಷ್ಟಾಚಾರವೇ ಈ ಸರ್ಕಾರದ ಸಾಧನೆ : ಭ್ರಷ್ಟಾಚಾರವೇ ಈ ಸರ್ಕಾರದ ಸಾಧನೆ. ಭರವಸೆಗಳನ್ನು ಈಡೇರಿಸದೇ ಇರುವುದೇ ಅವರ ದೊಡ್ಡ ಕೊಡುಗೆ. ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಎಲ್ಲಾ ವಿಧದ ಅವಕಾಶಗಳನ್ನು ಈ ಸರ್ಕಾರ ಬಳಸಿಕೊಂಡಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಲ್ಲ. 3 ಸಾವಿರ ಕೋಟಿ ಕೊಡ್ತೇವೆ ಎಂದಿದ್ದರು. ಆದರೆ, ಕೊಟ್ಟಿರೋದು 1 ಸಾವಿರ ಕೋಟಿ ರೂಪಾಯಿ ಮಾತ್ರ ಎಂದರು.
ನಿನ್ನೆ ಸಾಧನೆಯ ಪುಸ್ತಕವನ್ನ ಬಿಡುಗಡೆ ಮಾಡಿದ್ದಾರೆ. ಸಾಧನೆಯ ಬಗ್ಗೆ ಪುಸ್ತಕದಲ್ಲಿ ಇರಬೇಕಲ್ಲ. ಸಾಧನೆ ಬಿಟ್ಟು ಭರವಸೆಗಳನ್ನ ತೋರಿಸಿದ್ದಾರೆ. 6300 ಕೋಟಿ ನೀರಾವರಿಗೆ ಖರ್ಚು ಮಾಡಿದ್ದೇವೆ ಎಂದಿದ್ದಾರೆ. 1 ಲಕ್ಷ ಕೋಟಿ ಖರ್ಚು ಮಾಡುವುದಾಗಿ ಹೇಳಿದ್ದರು. ಪ್ರತಿವರ್ಷ 30 ಸಾವಿರ ಕೋಟಿ ಖರ್ಚು ಮಾಡಬೇಕು. ಆದರೆ, ಖರ್ಚು ಮಾಡಿರೋದು 6300 ಕೋಟಿ ಮಾತ್ರ ಎಂದು ಮಾಹಿತಿ ನೀಡಿದರು.
ಇಬ್ರಾಹಿಂ ಪಕ್ಷ ಬಿಡಲ್ಲ: ಎಂಎಲ್ಸಿ ಸಿ ಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷ ಬಿಡಲ್ಲ. ಇದು ಸತ್ಯ. ಅವರಿಗೆ ಈಗ ಪಕ್ಷದ ಮೇಲೆ ಕೋಪ ಬಂದಿದೆ. ಅದು ಕಡಿಮೆಯಾದ ಮೇಲೆ ನಾನೇ ಹೋಗಿ ಮಾತನಾಡ್ತೀನಿ. ಇಬ್ರಾಹಿಂ ನಾನು ಜೆಡಿಎಸ್ನಲ್ಲಿದ್ದಾಗಿನಿಂದಲೂ ಗೆಳೆಯರು. ಅವರು ಪಕ್ಷ ಬಿಡಲ್ಲ. ಇಬ್ರಾಹಿಂ ಜೊತೆ ನಜೀರ್ ಕೂಡ ಮೇಲ್ಮನೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಆಕಾಂಕ್ಷಿ ಆಗಿದ್ದರು. ಬಿ ಕೆ ಹರಿಪ್ರಸಾದ್ ಆಯ್ಕೆ ಆಗಿದ್ದಾರೆ. ಆಕಾಂಕ್ಷಿಗಳಿಗೆಲ್ಲರಿಗೂ ಸ್ಥಾನ ನೀಡೋಕ್ಕೆ ಆಗುತ್ತಾ? ಎಲ್ಲಾ ಸ್ಥಾನಮಾನಗಳ ಬಗ್ಗೆಯೂ ಹೈಕಮಾಂಡೇ ತೀರ್ಮಾನ ಮಾಡಲಿದೆ ಎಂದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ