ಬೆಂಗಳೂರು : ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಮಾಡಿದ ವೆಚ್ಚದ ವಿವರ ನೀಡಲೇಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಟ್ವೀಟ್ ಮೂಲಕ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ಕೊರೊನಾ ನಿಯಂತ್ರಣ ಉದ್ದೇಶಕ್ಕಾಗಿ ಖರ್ಚು ಮಾಡಿದ ಹಣದ ಲೆಕ್ಕ ಕೊಡಿ. ಲೆಕ್ಕ ಕೇಳುವುದು ರಾಜ್ಯದ ಜನತೆಯ ಹಕ್ಕು, ಲೆಕ್ಕ ಕೊಡುವುದು ನಿಮ್ಮ ಕರ್ತವ್ಯ ಎಂದಿದ್ದಾರೆ.
ವಿಡಿಯೋದಲ್ಲಿ ಕೊರೊನಾ ಸೋಂಕು ಬಂದಾಗಿನಿಂದ ಇದುವರೆಗೂ ರಾಜ್ಯ ಸರ್ಕಾರ ಖರ್ಚು ಮಾಡಿದ ಹಣ ಎಷ್ಟು? ಕೇಂದ್ರ ಸರ್ಕಾರ ಎಷ್ಟು ಹಣ ನೀಡಿದೆ? ಯಾವ್ಯಾವ ಇಲಾಖೆ, ಯಾವ್ಯಾವ ಬಾಬತ್ತಿಗೆ ಎಷ್ಟು ಹಣ ಖರ್ಚು ಮಾಡಿವೆ? ಪಿಪಿಇ ಕಿಟ್, ಟೆಸ್ಟ್ ಕಿಟ್, ಗ್ಲೌಸ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್, ಕಿಯೋಸ್ಕ್ ಮುಂತಾದವುಗಳಿಗೆ ಮಾರುಕಟ್ಟೆ ದರ ಎಷ್ಟು? ನೀವು ಪ್ರತಿಯೊಂದನ್ನೂ ಯಾವ್ಯಾವ ದರದಲ್ಲಿ ಖರೀದಿಸಿದ್ದೀರಿ? ಈವರೆಗೆ ಎಷ್ಟು ಫುಡ್ ಕಿಟ್ ಕೊಟ್ಟಿದ್ದೀರಿ? ಯಾರಿಗೆ ಕೊಟ್ಟಿದ್ದೀರಿ? ಪ್ರತಿಯೊಂದಕ್ಕೆ ಎಷ್ಟು ಹಣ ಖರ್ಚು ಮಾಡಿದ್ದೀರಿ? ತಾಲೂಕು ಹಾಗೂ ವಾರ್ಡ್ವಾರು ವಿವರ ನೀಡಿ ಎಂದು ಕೇಳಿದ್ದಾರೆ.
ಇನ್ನು, ವಲಸೆ ಕಾರ್ಮಿಕರಿಗೆ ಪ್ರಯಾಣ ಸಂದರ್ಭದಲ್ಲಿ ಎಷ್ಟೆಷ್ಟು ಫುಡ್ ಕಿಟ್ ಕೊಟ್ಟಿದ್ದೀರಿ? ಏನೇನು ಕೊಟ್ಟಿದ್ದೀರಿ? ಪ್ರತಿ ಕಿಟ್ಗೆ ಖರ್ಚಾದ ಹಣ ಎಷ್ಟು? ಸಂಕಷ್ಟದಲ್ಲಿರುವ ಜನರಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಘೋಷಿಸಿದ ಪ್ಯಾಕೇಜ್ಗಳು ಯಾವುದು? ಇದುವರೆಗೆ ಯಾವ ವೃತ್ತಿಯವರಿಗೆ, ಯಾವ್ಯಾವ ಸಮುದಾಯಕ್ಕೆ ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ? ಕೊರೊನಾ ಸಂತ್ರಸ್ತರ ಆರೈಕೆಗೆ ಎಷ್ಟು ಹಣ ಖರ್ಚು ಮಾಡಿದ್ದೀರಿ? ಈ ಎಲ್ಲದರ ಸಂಪೂರ್ಣ ಲೆಕ್ಕ ಕೊಡಿ ಎಂದು ಆಗ್ರಹಿಸಿದ್ದಾರೆ.