ಬೆಂಗಳೂರು: ಮುಸ್ಲಿಂ ಮಕ್ಕಳ ಶಿಕ್ಷಣಕ್ಕೆ ಹೃದಯ ವೈಶಾಲ್ಯತೆ ತೋರಿಸಿ. ಹಿಜಾಬ್ ಪ್ರಕರಣದ ಹಿಂದಿರುವ ರಿಮೋಟ್ ಕಂಟ್ರೋಲ್ ಚಿವುಟುವ ಕೆಲಸ ಮಾಡಿ. ಇದಕ್ಕೆ ನಮ್ಮ ಬೆಂಬಲ ಇದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸದನದಲ್ಲಿ ಹೇಳಿದರು. ವಿಧಾನಸಭೆಯಲ್ಲಿ ನಿಯಮ 69ರಡಿ ಚರ್ಚೆ ವೇಳೆ ಮಾತನಾಡಿದ ಅವರು, ಹಿಜಾಬ್ ಸಂಬಂಧ ಉಡುಪಿ ಬಳಿಕ ಹಲವು ಜಿಲ್ಲೆಗಳಲ್ಲಿ ಎರಡು ಧರ್ಮಿಯರ ಮಧ್ಯೆ ಸಂಘರ್ಷ ಆರಂಭವಾಗಿದೆ ಎಂದು ಸದನದಲ್ಲಿ ಹೇಳಿದರು.
ಜಿಲ್ಲೆಯಿಂದ ರಾಜ್ಯ ಮಟ್ಟ, ಅಲ್ಲಿಂದ ದೇಶದಲ್ಲೂ ಈ ವಿವಾದ ವ್ಯಾಪಿಸಿತು. ಹೈಕೋರ್ಟ್ ತೀರ್ಪಿನಲ್ಲಿ ಕಾಣದ ಕೈಗಳು ಇದರ ಹಿಂದಿವೆ ಎಂಬ ಉಲ್ಲೇಖವಿದೆ. ಇದು ನಿಜ, ಸಂಘರ್ಷದ ಹಿಂದೆ ಕಾಣದ ಕೈಗಳಿವೆ. ಸಿಎಫ್ಐ ವಿದ್ಯಾರ್ಥಿಗಳಿಗೆ ಚಿತಾವಣೆ ಮಾಡಿದೆ. ಎರಡೂ ಕಡೆಯ ವಿದ್ಯಾರ್ಥಿ ಸಂಘಟನೆಗಳ ಮಧ್ಯೆ ಸಂಘರ್ಷ ಪ್ರಾರಂಭ ಆಯ್ತು ಎಂದರು.
ಮುಗ್ಧ ಮನಸುಗಳ ಮೇಲೆ ಈ ಪ್ರಕರಣ ಪರಿಣಾಮ ಬೀರುತ್ತದೆ. ಆದರೆ ಉಡುಪಿ ಶಾಲೆಯಲ್ಲಿ ಶುರುವಾದ ಸಮವಸ್ತ್ರ ಭಿನ್ನಾಭಿಪ್ರಾಯಕ್ಕೆ ರಾಜಕೀಯವೂ ಬೆರೆತಿದೆ. ಹಲವಾರು ಕುಟುಂಬಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲಾಗದೆ ಇರುವ ಪರಿಸ್ಥಿತಿ ಇದೆ. ಇಂತಹ ಸಂದರ್ಭಗಳಲ್ಲಿ ನಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ಎಡವಬಾರದು ಎಂದು ಸಲಹೆ ನೀಡಿದರು.
ಹಿಜಾಬ್ ಹಾಗೂ ಮಳಿಗೆಗಳ ಬಹಿಷ್ಕಾರಕ್ಕೆ ಸಂಬಂಧಿಸಿದಂತೆ ಶಾಂತಿ ಸಭೆ ಮಾಡಬೇಕು. ಎಲ್ಲರೂ ಒಟ್ಟಿಗೆ ಬದುಕಬೇಕು, ಎಲ್ಲಾ ಮುಖಂಡರನ್ನು ಸಭೆಗೆ ಕರೆಯಿರಿ. ವಿವಾದಕ್ಕೆ ಇತಿಶ್ರೀ ಹಾಡಿದ್ರೆ ನಿಮಗೂ ಒಳ್ಳೆಯ ಹೆಸರು ಬರುತ್ತದೆ. ಎಲ್ಲರನ್ನೂ ಸರಿಸಮಾನವಾಗಿ ನೋಡ್ತೇವೆ ಎಂದು ಪ್ರಮಾಣವಚನ ಸ್ವೀಕಾರ ಮಾಡ್ತೇವೆ.
ಆದ್ದರಿಂದ ಇಂತಹ ವಾತಾವರಣ ನಿರ್ಮಾಣ ಮಾಡಿದವರನ್ನು ಬಲಿ ಹಾಕಿ. ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಿ. ಸಮಾಜ ಹಾಳಾಗೋದು ಬೇಡ. ಸರ್ಕಾರ ತಾಯಿ ಹೃದಯದಿಂದ ತೀರ್ಮಾನ ಮಾಡಬೇಕು ಎಂದು ಸರ್ಕಾರಕ್ಕೆ ಹೆಚ್‌ಚಿಕೆ ಮನವಿ ಮಾಡಿದರು.
ಇದನ್ನೂ ಓದಿ: ವಿಧಾನ ಪರಿಷತ್ನಲ್ಲಿ ಕರ್ನಾಟಕ ಪ್ರದೇಶಾಭಿವೃದ್ಧಿ ಅಧಿನಿಯಮ 1966 (ತಿದ್ದುಪಡಿ)ವಿಧೇಯಕ ಅಂಗೀಕಾರ