ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿ ಎಸ್ ಯಡಿಯೂರಪ್ಪ ತಮಗಿರುವ ಮಾಸ್ ಇಮೇಜ್ ಉಳಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಅಧಿಕಾರವಿಲ್ಲದೆ ಇದ್ದರೂ ರಾಜ್ಯದಲ್ಲಿ ತಮಗಿರುವ ವರ್ಚಸ್ಸು ಕುಂದದಂತೆ ನೋಡಿಕೊಳ್ಳಲು ರಾಜ್ಯ ರಾಜಕೀಯದಲ್ಲಿ ತಮಗಿರುವ ಹಿಡಿತ ಕಳೆದುಕೊಳ್ಳದಿರಲು ಹೊಸ ಗೇಮ್ ಪ್ಲಾನ್ ರೂಪಿಸಿದ್ದಾರೆ.
ಪ್ರವಾಸದ ಹಾದಿ ಆಯ್ಕೆ : 75 ವರ್ಷ ದಾಟಿದ ನಂತರ ಯಾವುದೇ ಅಧಿಕಾರ ಸ್ಥಾನಮಾನದ ಜವಾಬ್ದಾರಿ ನೀಡದಿರುವ ಅಲಿಖಿತ ನಿಯಮವನ್ನು ಅಳವಡಿಸಿಕೊಂಡಿರುವ ಹಿನ್ನೆಲೆ ಬಿಜೆಪಿ ಹಿರಿಯ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ ಮಾರ್ಗದರ್ಶಕ ಮಂಡಳಿ ಸೇರಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ತಮಗೂ ಮಾರ್ದರ್ಶಕ ಮಂಡಳಿ ಸೇರುವ ಪರಿಸ್ಥಿತಿ ಬಾರದಿರಲಿ ಎಂದು ರಾಜಕಾರಣದಲ್ಲಿ ಸಕ್ರಿಯವಾಗಿರಲು ಮಾಜಿ ಸಿಎಂ ಯಡಿಯೂರಪ್ಪ ನಿರ್ಧರಿಸಿದ್ದಾರೆ. ಅದಕ್ಕಾಗಿ ರಾಜ್ಯ ಪ್ರವಾಸದ ಹಾದಿ ಆಯ್ಕೆ ಮಾಡಿದ್ದಾರೆ.
1983ರಿಂದ 2021ರವರೆಗೂ ಸುದೀರ್ಘ ರಾಜಕಾರಣದಲ್ಲಿ ಯಡಿಯೂರಪ್ಪ ವಿರಮಿಸಿಯೇ ಇಲ್ಲ. 2006-2011ರವರೆಗೆ ಮತ್ತು 2019-2021ರವರೆಗೆ ಒಟ್ಟು 7 ವರ್ಷ ಮಾತ್ರ ಸರ್ಕಾರದಲ್ಲಿದ್ದ ಯಡಿಯೂರಪ್ಪ ಉಳಿದಂತೆ ಪ್ರತಿಪಕ್ಷದಲ್ಲಿದ್ದುಕೊಂಡು ಹೋರಾಟ ಮಾಡಿಕೊಂಡೇ ಬಂದವರು. ನಿಂತಲ್ಲಿ ನಿಲ್ಲದೆ ಪಾದರಸದಂತೆ ಸದಾ ಚಟುವಟಿಕೆಯಿಂದ ಇದ್ದು ಪ್ರವಾಸದ ಮೂಲಕ ಪಕ್ಷ ಸಂಘಟನೆ ಮಾಡುತ್ತಲೇ ಜೀವ ಸವೆಸಿದ್ದಾರೆ.
ಮಾಸ್ ಇಮೇಜ್ ಕಾಪಾಡಿಕೊಳ್ಳಲು ತಂತ್ರ : ಈಗ 79 ವರ್ಷವಾದರೂ ರಾಜ್ಯವನ್ನು ಆಳಿ ರಾಜೀನಾಮೆ ನೀಡಿದ್ದಾರೆ. ಆದರೂ ಸುಮ್ಮನೆ ಕೂರುವ ಜಾಯಮಾನ ಯಡಿಯೂರಪ್ಪ ಅವರದ್ದಲ್ಲ. ಸದಾ ಜನರೊಂದಿಗೆ ಇರುವುದನ್ನೇ ರೂಢಿಸಿಕೊಂಡು ಬಂದಿರುವ ಬಿಎಸ್ವೈ ಈಗಲೂ ಅದೇ ಜನರ ಜೊತೆ ಇರುವ ಬಯಕೆ ಹೊಂದಿದ್ದಾರೆ. ಕೇವಲ ಲಿಂಗಾಯತ ಸಮುದಾಯಕ್ಕೆ ಸೀಮಿತವಾಗದೆ ಮಾಸ್ ಲೀಡರ್ ಆಗಿ ಬೆಳೆದಿದ್ದು, ಈಗ ತಮಗಿರುವ ಮಾಸ್ ಇಮೇಜ್ ಅನ್ನು ಮುಂದಿನ ಚುನಾವಣೆವರೆಗೂ ಕಾಪಾಡಿಕೊಳ್ಳಲು ತಂತ್ರ ಹೆಣೆದಿದ್ದಾರೆ.
ಸದ್ಯ ರಾಜ್ಯ ಬಿಜೆಪಿಗೆ ಹೊಸ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದ್ದರೂ ಯಡಿಯೂರಪ್ಪ ಅವರೇ ರಾಜ್ಯ ಬಿಜೆಪಿಯ ಶಕ್ತಿ ಕೇಂದ್ರವಾಗಿದ್ದಾರೆ. ಪಕ್ಷದಲ್ಲಿ ತಮ್ಮದೇ ಹಿಡಿತ ಇದೆ. ಇದೇ ಹಿಡಿತವನ್ನು ಮುಂಬರಲಿರುವ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆವರೆಗೂ ಹೊಂದಿರಬೇಕು ಎನ್ನುವುದು ಯಡಿಯೂರಪ್ಪ ಅವರ ಬಯಕೆಯಾಗಿದೆ. ಟಿಕೆಟ್ ಹಂಚಿಕೆಯಲ್ಲಿ ತಮ್ಮ ಪಾತ್ರ ಪ್ರಮುಖವಾಗಿರಬೇಕು. ಹಾಗಾಗಿ, ಈಗಿರುವ ಇಮೇಜ್ ಕಡಿಮೆಯಾಗದಂತೆ ನೋಡಿಕೊಳ್ಳಬೇಕಿದೆ.
ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಜವಾಬ್ದಾರಿ : ಬಿಜೆಪಿಯಲ್ಲಿ ಉಕ್ಕಿನ ಮನುಷ್ಯ ಎಂದೇ ಹೆಸರು ಮಾಡಿದ್ದ ಅಡ್ವಾಣಿ ಮಾರ್ಗದರ್ಶಕ ಮಂಡಳಿ ಸೇರುತ್ತಿದ್ದಂತೆ ಜನರಿಂದ ದೂರ ಉಳಿದು ನೇಪಥ್ಯಕ್ಕೆ ಸರಿದಿದ್ದಾರೆ. ಪಕ್ಷದಲ್ಲಿ ಇಂದು ಅವರ ಯಾವುದೇ ಮಾತುಗಳು ನಡೆಯದ ಸ್ಥಿತಿ ಇದೆ. ಅಂತಹ ಸ್ಥಿತಿ ತಮಗೆ ಎದುರಾಗಬಾರದು ಎನ್ನುವ ಕಾರಣಕ್ಕೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನು ಸ್ವತಃ ವಹಿಸಿಕೊಂಡಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆಯನ್ನೂ ಮಾಡಿದ್ದಾರೆ.
ರಾಜಕೀಯವಾಗಿ ಶಕ್ತನಿದ್ದೇನೆ : ಜನರಿಂದ ದೂರ ಉಳಿದರೆ ಎಂತಹ ನಾಯಕನಾದರೂ ಜನರ ಮನಸ್ಸಿನಿಂದ ದೂರವಾಗಿ ಬಿಡುತ್ತಾನೆ ಎಂದು ಅರಿತಿರುವ ಬಿಎಸ್ವೈ ಜನರ ಬಳಿ ತೆರಳಿ ಜನಮಾನಸದಲ್ಲಿ ಉಳಿಯಲು ರಾಜ್ಯ ಪ್ರವಾಸದ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರತಿ ವಾರ ಒಂದೊಂದು ತಾಲೂಕಿಗೆ ಹೋಗಿ ಪಕ್ಷ ಸಂಘಟನೆ ಮಾಡುವ ಮೂಲಕ ವಯಸ್ಸಿನ ಕಾರಣ ನೀಡಿ ಅಧಿಕಾರದಿಂದ ಇಳಿಸಿರುವ ಹೈಕಮಾಂಡ್ ನಾಯಕರಿಗೆ ತಾವಿನ್ನೂ ರಾಜಕೀಯವಾಗಿ ಶಕ್ತನಿದ್ದೇನೆ ಎಂದು ತೋರಿಸಲು ಮುಂದಾಗಿದ್ದಾರೆ. ಅದಕ್ಕಾಗಿಯೇ ರಾಜ್ಯಪಾಲ ಹುದ್ದೆಯನ್ನು ಯಡಿಯೂರಪ್ಪ ನಿರಾಕರಿಸಿದ್ದಾರೆ.
ಮಕ್ಕಳ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾದಿ : ರಾಜ್ಯಪಾಲ ಹುದ್ದೆ ವಹಿಸಿಕೊಂಡರೆ ಜನರಿಂದ ದೂರವಾಗಿ ಉಳಿಯಬೇಕಾಗಲಿದೆ. ಈಗಿರುವ ಮಾಸ್ ಇಮೇಜ್ ಅನ್ನು ಕಳೆದುಕೊಂಡು ಸಕ್ರಿಯ ರಾಜಕಾರಣದಿಂದ ದೂರ ಉಳಿಯಬೇಕಾಗಲಿದೆ. ಹಾಗಾದಲ್ಲಿ ಜನ ಯಡಿಯೂರಪ್ಪ ನಾಯಕತ್ವವನ್ನು ಮರೆತು ಬಿಡಲಿದ್ದಾರೆ. ಹೀಗಾದಲ್ಲಿ ಮಕ್ಕಳ ರಾಜಕೀಯ ಉನ್ನತಿಗೆ ಹೆಗಲು ಕೊಡಲು ಕಷ್ಟವಾಗಲಿದೆ ಎನ್ನುವುದು ಸದ್ಯ ಯಡಿಯೂರಪ್ಪ ಅವರನ್ನು ಕಾಡುತ್ತಿರುವ ಆತಂಕ.
ಹಾಗಾಗಿ , ಸಕ್ರೀಯ ರಾಜಕೀಯದಲ್ಲಿದ್ದುಕೊಂಡು, ಮುಂದಿನ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮೂಲಕ ಪಕ್ಷದಲ್ಲಿ ಹಿಡಿತ ಮುಂದುವರೆಸುವುದು ಮತ್ತು ಮಕ್ಕಳ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವುದು ಯಡಿಯೂರಪ್ಪ ಅವರ ಬಯಕೆಯಾಗಿದೆ. ಹಾಗಾಗಿ, 79ರ ಈ ಇಳಿ ವಯಸ್ಸಿನಲ್ಲೂ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ.
ಗಣೇಶ ಚತುರ್ಥಿ ನಂತರ ರಾಜ್ಯ ಪ್ರವಾಸ ಆರಂಭಿಸುವುದಾಗಿ ಈಗಾಗಲೇ ಘೋಷಣೆ ಮಾಡಿರುವ ಮಾಜಿ ಸಿಎಂ ಯಡಿಯೂರಪ್ಪ, ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಯಾವ ಭಾಗದಿಂದ ಪ್ರವಾಸ ಆರಂಭಿಸಬೇಕು, ಪ್ರವಾಸ ಯಾವ ರೀತಿ ಇರಬೇಕು ಎನ್ನುವ ಕುರಿತು ಯೋಜನೆ ರೂಪಿಸಿಕೊಳ್ಳುತ್ತಿದ್ದಾರೆ.
ರೆಸಾರ್ಟ್ನಲ್ಲಿ ವಿಶ್ರಾಂತಿ : ರಾಜ್ಯ ಪ್ರವಾಸದ ಆರಂಭಕ್ಕೂ ಮುನ್ನ ಒಂದು ವಿಶ್ರಾಂತಿಯನ್ನು ಪಡೆಯಲು ಯಡಿಯೂರಪ್ಪ ಮುಂದಾಗಿದ್ದಾರೆ. ಸತತ ಎರಡು ವರ್ಷ ನೆರೆ, ಕೊರೊನಾ ಸಂಕಷ್ಟ ಎದುರಿಸಿ ಆಡಳಿತ ನಡೆಸಿರುವ ಯಡಿಯೂರಪ್ಪ ಎರಡು ಬಾರಿ ಕೊರೊನಾ ಸೋಂಕಿಗೂ ಸಿಲುಕಿ ಗೆದ್ದು ಬಂದಿದ್ದಾರೆ.
ನಿರಂತರ ಒತ್ತಡದ ಕೆಲಸದಿಂದ ದಣಿದಿರುವ ದೇಹ ಹಾಗೂ ಮನಸ್ಸಿಗೆ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಒಂದು ವಾರ ಕುಟುಂಬ ಸಮೇತ ರೆಸಾರ್ಟ್ಗೆ ತರಳಿ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗ್ತಿದೆ.
ಮಾರ್ಗದರ್ಶಕ ಮಂಡಳಿ ಸೇರಲು ಸುತಾರಾಂ ಸಿದ್ಧವಿಲ್ಲದ ಯಡಿಯೂರಪ್ಪ ರಾಜ್ಯದಲ್ಲಿ ತಮ್ಮ ರಾಜಕೀಯ ಅಧಿಪತ್ಯ ಅಂತ್ಯವಾಗಿಲ್ಲ ಎನ್ನುವುದನ್ನು ಸಾಬೀತು ಪಡಿಸಲು ಹೊರಟಿದ್ದಾರೆ. ಪಕ್ಷದಲ್ಲಿ ಹಿಡಿತ ಸಾಧಿಸಿ ಮುಂಬರಲಿರುವ ಚುನಾವಣೆ ನೇತೃತ್ವ ವಹಿಸಿಕೊಳ್ಳಲು ಮತ್ತು ಮಕ್ಕಳ ರಾಜಕೀಯ ಭವಿಷ್ಯವನ್ನು ಭದ್ರಪಡಿಸಲು ಮುಂದಾಗಿದ್ದಾರೆ.