ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಒಂದು ವರ್ಷದಿಂದ ಹಂತ ಹಂತವಾಗಿ ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸುತ್ತಾ ಬಂದಿರುವ ಹೈಕಮಾಂಡ್ ನಡೆಗೆ ಕೆರಳಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದಿಢೀರ್ ಚುನಾವಣೆ ರಾಜಕೀಯ ನಿವೃತ್ತಿ ಘೋಷಿಸಿ ಬಿಜೆಪಿ ಹೈಕಮಾಂಡ್ಗೆ ಬಿಸಿ ಮುಟ್ಟಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಅಧಿಕಾರ ಬಿಟ್ಟುಕೊಡುವ ಸಂದರ್ಭದಲ್ಲಿ ಕಳೆದ ವರ್ಷ ಹೈಕಮಾಂಡ್ ತಾವು ನೀಡಿದ ಭರವಸೆಗಳನ್ನು ಈಡೇರಿಸದ ಕಾರಣ ಹಾಗೂ ಪಕ್ಷದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳದೇ ಇರುವುದು ಮತ್ತು ತಮ್ಮ ಪುತ್ರ ಬಿ.ವೈ ವಿಜಯೇಂದ್ರಗೆ ಸೂಕ್ತ ಸ್ಥಾನಮಾನ ನೀಡದೇ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದಕ್ಕೆ ಆಕ್ರೋಶಗೊಂಡಿರುವ ಯಡಿಯೂರಪ್ಪ, ಚುನಾವಣೆ ನಿವೃತ್ತಿಯಂತಹ ನಿರ್ಧಾರ ತೆಗೆದುಕೊಂಡು, ಘೋಷಣೆಯನ್ನು ಸಹ ಮಾಡಿ ಬಿಜೆಪಿ ಹೈಕಮಾಂಡ್ಗೆ ಅಸಮಾಧಾನದ ತೀವ್ರತೆಯ ಸಂದೇಶ ರವಾನಿಸಿದ್ದಾರೆ ಎನ್ನಲಾಗ್ತಿದೆ.
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ತಮ್ಮ ಮಾರ್ಗದರ್ಶನದ ಪ್ರಕಾರ ಸರ್ಕಾರ ಮತ್ತು ಪಕ್ಷ ಮುನ್ನಡೆಯಬೇಕು. ತಮ್ಮ ಪುತ್ರ ವಿಜಯೇಂದ್ರಗೆ ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಅಥವಾ ಪ್ರಮುಖ ಖಾತೆಯ ಸಚಿವ ಸ್ಥಾನ ನೀಡಬೇಕೆನ್ನುವುದು ಯಡಿಯೂರಪ್ಪ ಅವರ ಬೇಡಿಕೆಯಾಗಿತ್ತು. ಆದರೆ ಇದ್ಯಾವುದು ಈಡೇರದ ಕಾರಣ ಹೈಕಮಾಂಡ್ ಮೇಲಿನ ವಿಶ್ವಾಸ ಕಳೆದುಕೊಂಡ ಯಡಿಯೂರಪ್ಪ ಬಿಜೆಪಿಯ ಸಹವಾಸವೇ ಬೇಡ ಎನ್ನುವ ಅರ್ಥದಲ್ಲಿ ಚುನಾವಣೆ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇದರ ಪರಿಣಾಮ ಎದುರಿಸುವಂತೆ ಪಕ್ಷದಲ್ಲಿರುವ ತಮ್ಮ ವಿರೋಧಿಗಳಿಗೆ ಸವಾಲು ಹಾಕಿದ್ದಾರೆ.
ಹೈಕಮಾಂಡ್ಗೆ ಉತ್ತರಾಧಿಕಾರಿಯ ಶಾಕ್: ನಿವೃತ್ತಿಯ ಜೊತೆಗೆ ಯಡಿಯೂರಪ್ಪ ಅವರು ಶಿಕಾರಿಪುರ ಕ್ಷೇತ್ರದಲ್ಲಿ ತಮ್ಮ ಪುತ್ರ ಬಿ ವೈ ವಿಜಯೇಂದ್ರ ಇನ್ನು ಮುಂದೆ ಉತ್ತರಾಧಿಕಾರಿಯಾಗಲಿದ್ದಾರೆ. ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಹೇಳುವ ಮೂಲಕ ಹೈಕಮಾಂಡ್ಗೆ ಮತ್ತೊಂದು ಶಾಕ್ ನೀಡಿದ್ದಾರೆ.
ಬಿಜೆಪಿಯಲ್ಲಿ ರಾಷ್ಟ್ರೀಯ ಸಂಸದೀಯ ಮಂಡಳಿ ವಿಧಾನಸಭೆ ಟಿಕೆಟ್ ಘೋಷಣೆ ಮಾಡುವ ಅಧಿಕಾರ ಹೊಂದಿರುವ ಸಂಗತಿ ತಿಳಿದು ಯಡಿಯೂರಪ್ಪ ಶಿಕಾರಿಪುರದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪುತ್ರ ವಿಜಯೇಂದ್ರ ಅವರು ತಮ್ಮ ಉತ್ತರಾಧಿಕಾರಿಯಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದು ಘೋಷಣೆ ಮಾಡುವ ಮೂಲಕ ಹೈಕಮಾಂಡ್ ಕೆರಳಿಸುವ ಯತ್ನವನ್ನೂ ಮಾಡಿದ್ದಾರೆ.
ಯಡಿಯೂರಪ್ಪ ಚುನಾವಣೆ ರಾಜಕೀಯ ನಿವೃತ್ತಿ ಹಾಗೂ ಪುತ್ರ ವಿಜಯೇಂದ್ರ ಉತ್ತರಾಧಿಕಾರಿ ಎನ್ನುವ ಘೋಷಣೆ ಬಿಜೆಪಿ ಹೈಕಮಾಂಡ್ಅನ್ನು ತಬ್ಬಿಬ್ಬುಗೊಳಿಸಿದೆ. ಬಿಎಸ್ವೈ ಈ ನಿರ್ಧಾರ ಪ್ರಕಟದಿಂದ ಬಿಜೆಪಿ ಪಕ್ಷದ ಮೇಲಾಗುವ ಡ್ಯಾಮೇಜ್ ಕಂಟ್ರೋಲ್ಗೆ ಪುತ್ರ ವಿಜಯೇಂದ್ರಗೆ ಸರ್ಕಾರ ಅಥವಾ ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡುವ ಒತ್ತಡಕ್ಕೆ ಹೈಕಮಾಂಡ್ ಸಿಲುಕಿದಂತಾಗಿದೆ.
ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ: ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟ ಮಾಜಿ ಸಿಎಂ