ಹೊಸಕೋಟೆ (ಬೆಂಗಳೂರು ಗ್ರಾಮಾಂತರ) : ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಜನ ಸ್ವರಾಜ್ ಯಾತ್ರಾ(Jana swaraj yatra) ರಾಜ್ಯದಲ್ಲಿ ಯಶಸ್ವಿಯಾಗಿ ಸಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್(Ex CM Jagadish Shettar) ಹೇಳಿದರು.
ಹೊಸಕೋಟೆ ನಗರದಲ್ಲಿ ಹಮ್ಮಿಕೊಂಡಿದ್ದ ಜನ ಸ್ವರಾಜ್ ಯಾತ್ರಾ ಕಾರ್ಯಕ್ರಮದಲ್ಲಿ (jana swaraj) ಮಾತನಾಡಿದ ಅವರು, ಪ್ರತಿ ಜಿಲ್ಲೆಯಲ್ಲೂ ಜನ ಸ್ವರಾಜ್ ಸಮಾವೇಶಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು:
ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಿದೆ. ದಿನೇ ದಿನೇ ಪಕ್ಷ ನಂಬಿಕೆ ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದಕ್ಕೆ ಪ್ರತಿಯೊಬ್ಬರೂ ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ. ಬಿಜೆಪಿಯ ಜನಪರ ಯೋಜನೆಗಳನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವ ಮೂಲಕ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಕೆಲಸ ಮಾಡೋಣ ಎಂದರು.
ಮೂರು ಕೃಷಿ ಕಾಯ್ದೆ ವಾಪಸ್(Repeal of farm laws) ಪಡೆಯುತ್ತಿರುವ ಕುರಿತು ಮಾತನಾಡಿ, ಮೋದಿ ಅಧಿಕಾರಕ್ಕೆ ಬಂದ ಮೇಲೆ ರೈತರ ಆದಾಯ ದ್ವಿಗುಣ ಮಾಡುತ್ತೇನೆ ಎಂದು ಹೇಳಿದ್ರು. ಕೃಷಿ ಕಾಯ್ದೆಗಳು ರೈತರ ಪರವಾಗಿತ್ತು. ಈ ಮೊದಲು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಗುತ್ತಿರಲಿಲ್ಲ. 60 ವರ್ಷದಿಂದ ಕಾಂಗ್ರೆಸ್ನವರು ಶೋಷಣೆ ಮಾಡಿ ವೋಟಿಗಾಗಿ ರೈತರನ್ನು ಬಳಸಿಕೊಂಡಿದ್ದಾರೆ. ಕಾಂಗ್ರೆಸ್ನವರ ಪ್ರೇರಣೆಯಿಂದ ಆ ಕಾಯ್ದೆಗಳನ್ನು ವಾಪಸ್ ಪಡೆದುಕೊಂಡಿದ್ದಾರೆ ಎಂದು ಶೆಟ್ಟರ್ ವಾಗ್ದಾಳಿ ನಡೆಸಿದರು.
ಸಚಿವ ಎಂಟಿಬಿ ನಾಗರಾಜ ಮಾತನಾಡಿ, ಕಳೆದ 8 ವರ್ಷದಲ್ಲಿ ರೈತರ ಪರವಾಗಿ, ಕಾರ್ಮಿಕರ ಪರವಾಗಿ ಉತ್ತಮ ಕಾರ್ಯಕ್ರಮ ರೂಪಿಸಿ ಕೇಂದ್ರ ಸರ್ಕಾರ ಜಾರಿ ಮಾಡಿದ್ದು, ಉತ್ತಮ ಆಡಳಿತ ನೀಡುತ್ತಿದೆ ಎಂದು ಹೇಳಿದರು. ವಿಧಾನಪರಿಷತ್, ಬಿಬಿಎಂಪಿ, ಜಿ.ಪಂ, ತಾ.ಪಂ ಚುನಾವಣೆಗಳು ಬರಲಿದ್ದು, ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸೋಣ. ಪಕ್ಷ ಸಂಘಟನೆ ಬಗ್ಗೆ ಹೆಚ್ಚು ಒತ್ತು ಕೊಟ್ಟು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವತ್ತ ಗಮನ ನೀಡೋಣ ಎಂದು ಕರೆ ಕೊಟ್ಟರು.
ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಬಿಜೆಪಿಯಲ್ಲಿ ಹೊಸ ಖಾತೆ ತೆರೆಯುವ ಕೆಲಸ ಮಾಡಬೇಕು. ಪ್ರತಿನಿತ್ಯ 12 ಗಂಟೆ ಹೊಸಕೋಟೆ ತಾಲೂಕಿನಲ್ಲಿ ಪಕ್ಷಕ್ಕಾಗಿ ಒಬ್ಬ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.
ಸಚಿವ ಭೈರತಿ ಬಸವರಾಜ ಮಾತನಾಡಿ, ಬಿಜೆಪಿ ಪಕ್ಷ ಯಾವ ಅಭ್ಯರ್ಥಿಯನ್ನು ನೀಡಿದೆಯೋ ಆ ಅಭ್ಯರ್ಥಿಯನ್ನು ಪ್ರಾಮಾಣಿಕವಾಗಿ ಗೆಲ್ಲಿಸಿಕೊಡುವ ಕೆಲಸ ಮಾಡುತ್ತೇವೆ. ಗ್ರಾಮ ಪಂಚಾಯತ್ಗೆ ಶಕ್ತಿ ತುಂಬುವ ಕೆಲಸ ಪ್ರಧಾನಮಂತ್ರಿ ಮಾಡಿದ್ದಾರೆ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರತಿಯೊಬ್ಬ ಮುಖಂಡರು ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಹಾಗೂ ಸಂಸದ ಬಚ್ಚೇಗೌಡ ಸಮಾವೇಶಕ್ಕೆ ಗೈರಾಗಿದ್ದರು. ಸಂಸದ ಬಚ್ಚೇಗೌಡ ಅವರು ಹೊಸಕೋಟೆ ತಾಲೂಕಿನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಈವರೆಗೂ ಕಾಣಿಸಿಕೊಳ್ಳಲಿಲ್ಲ.
ಕಾಂಗ್ರೆಸ್ ಅನ್ನು ದುರ್ಬಿನ್ ಹಾಕಿ ನೋಡುವ ಪರಿಸ್ಥಿತಿಯಿದೆ:
ಜನ ಸ್ವರಾಜ್ ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಶೆಟ್ಟರ್, ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ದುರ್ಬಿನ್ ಹಾಕಿ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು. ಡಿಕೆಶಿ, ಸಿದ್ದರಾಮಯ್ಯ ನಡುವೆ ಸಮನ್ವಯತೆಯಿಲ್ಲ. ಇವರಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಂತ್ಯಗೊಳ್ಳಲಿದೆ. ಇನ್ನು ಪಂಜಾಬ್ನಲ್ಲಿ ಒಬ್ಬರು ಸಿದು ಇದ್ದರೆ ರಾಜ್ಯದಲ್ಲಿ ಒಬ್ಬರು ಸಿದ್ದು ಇದ್ದು ಇವರಿಂದ ಕಾಂಗ್ರೆಸ್ ಪಕ್ಷ ಸದ್ಯದಲ್ಲಿ ನೆಲೆ ಕಚ್ಚಲಿದೆ ಎಂದರು.
ರಾಜ್ಯದಲ್ಲಿ ಮುಖ್ಯ ಮಂತ್ರಿ ಪಟ್ಟಾಕ್ಕಾಗಿ ಚುನಾವಣೆ ಸಮಯದಲ್ಲಿ ಡಿಕೆಶಿ, ಸಿದ್ದರಾಮಯ್ಯ ನಡುವೆ ಪೈಪೋಟಿ ಬಂದು ಕಾಂಗ್ರೆಸ್ ಪಕ್ಷ ಒಡೆದು ಹೊಗುತ್ತದೆ. ಮತ್ತೊಮ್ಮೆ ಸಿಎಂ ಆಗುವ ಕನಸು ಕಾಣುತ್ತಿರುವ ಸಿದ್ದರಾಮಯ್ಯನವರು, ಡಿಕೆಶಿ ವಿರುದ್ಧ ತಿರುಗಿ ಬೀಳಲಿದ್ದಾರೆ ಎಂದರು.
ಸಿದ್ದರಾಮಯ್ಯ ಜೆಡಿಸ್ನಲ್ಲಿ ಅಧಿಕಾರ ಸಿಗಲಿಲ್ಲವೆಂದು ಕಾಂಗ್ರೆಸ್ಗೆ ಬಂದರು. ಇಲ್ಲೂ ಅಧಿಕಾರ ಸಿಗದಿದ್ದರೆ ಹೊರ ಬರಲಿದ್ದಾರೆ ಎಂದರು. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. 25 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ನಡೆಯುತ್ತಿದ್ದು, ನರೇಂದ್ರ ಮೋದಿಗೆ ಪರ್ಯಾಯ ನಾಯಕರು ದೇಶದಲ್ಲಿ ಕಾಣುತ್ತಿಲ್ಲವೆಂದರು.
ಇದನ್ನೂ ಓದಿ: ನಿಮ್ಮಲ್ಲೆರ ಪ್ರೀತಿ, ಅಭಿಮಾನಕ್ಕೆ ನಾನು ಋಣಿ : ಪದ್ಮಶ್ರೀ ಹರೇಕಳ ಹಾಜಬ್ಬ
ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥ್ನಾರಾಯಣ್, ಮಾಜಿ ಶಾಸಕ ಚಂದ್ರಣ್ಣ, ಬಿಎಂಆರ್‌ಡಿ ಅಧ್ಯಕ್ಷ ನಾಗರಾಜ, ನಗರಸಭೆ ಅಧ್ಯಕ್ಷ ಅರುಣ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೋಮಶೇಖರ್, ಟೌನ್ ಬ್ಯಾಂಕ್ ಉಪಾಧ್ಯಕ್ಷ ಬಾಲಚಂದ್ರ, ಸದಸ್ಯ ಅಪ್ಸರ್, ಜಿ.ಟಿ. ಮೋಹನ್, ನಗರಸಭೆ ಸದಸ್ಯರಾದ ನಿತೀನ್, ನವೀನ್, ಜುಂಜಪ್ಪ ಮತ್ತಿತರರಿದ್ದರು.