ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿ ಹೆಚ್ಚಿನ ಗಮನ ಹರಿಸಿದ್ದ ಸರ್ಕಾರ ಇದೀಗ ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚಿನ ನಿಗಾ ವಹಿಸಲು ಮುಂದಾಗಿದೆ.
ಇದೀಗ ಗ್ರಾಮೀಣ ಮಟ್ಟದಲ್ಲಿಯೂ ವೈರಸ್ ಹರಡುವ ಆತಂಕದ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮ ಮಟ್ಟದಲ್ಲಿಯೂ ಪಂಚಾಯತಿ ಸದಸ್ಯರ ಅಧ್ಯಕ್ಷತೆಯಲ್ಲಿ ಕೊರೊನಾ ನಿಯಂತ್ರಣ ಟಾಸ್ಕ್ ಫೋರ್ಸ್ ರಚನೆ ಮಾಡಿ ಆದೇಶ ಹೊರಡಿಸಿದೆ.
ಕೊರೊನಾ ಭೀತಿ ಹಿನ್ನೆಲೆ ಇತ್ತೀಚೆಗೆ ಹಲವರು ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ವಲಸೆ ಹೋಗಿದ್ದರಿಂದ ಗ್ರಾಮೀಣ ಪ್ರದೇಶಗಳಲ್ಲೂ ವೈರಸ್ ಹಬ್ಬುವ ಆತಂಕ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡ ಸರ್ಕಾರ ಪ್ರತಿ ಗ್ರಾಪಂ ಮಟ್ಟದಲ್ಲಿ ಪಂಚಾಯತಿ ಅಧ್ಯಕ್ಷರ ಅಧ್ಯಕ್ಷತೆ ಹಾಗೂ ಪಂಚಾಯತಿ ಸದಸ್ಯರ ಅಧ್ಯಕ್ಷತೆಯಲ್ಲಿ 10 ಜನರ ಟಾಸ್ಕ್ ಫೋರ್ಸ್ ರಚನೆ ಮಾಡಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮದ ಒಬ್ಬರು ಪಂಚಾಯತಿ ಸದಸ್ಯರು, ಕಂದಾಯ ನಿರೀಕ್ಷಕರು, ವೈದ್ಯಾಧಿಕಾರಿ, ಪೊಲೀಸ್ ಪ್ರತಿನಿಧಿ, ಅಂಗನವಾಡಿ ಮೇಲ್ವಿಚಾರಕರು, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಪ್ರತಿನಿಧಿ ಹಾಗೂ ಪಿಡಿಒ ಟಾಸ್ಕ್ ಫೋರ್ಸ್ನಲ್ಲಿ ಇರಲಿದ್ದಾರೆ.
ಈ ಟಾಸ್ಕ್ ಫೋರ್ಸ್ ವಾರದಲ್ಲಿ ಸೋಮವಾರ ಹಾಗೂ ಗುರುವಾರ ಸಭೆ ಸೇರಿ ಜಿಲ್ಲಾಧಿಕಾರಿಗಳು, ಆರೋಗ್ಯಾಧಿಕಾರಿಗಳು ನೀಡುವ ಸೂಚನೆಗಳನ್ನು ಗ್ರಾಮದಲ್ಲಿ ಪಾಲಿಸಬೇಕು. ಜೊತೆಗೆ ಊರಲ್ಲಿ ಜಾತ್ರೆ, ಮದುವೆ, ಹಬ್ಬ ಆಚರಿಸದಂತೆ ಸೂಚನೆ ನೀಡಬೇಕು. ಗ್ರಾಮದಲ್ಲಿ 60 ವರ್ಷ ಮೀರಿದವರ ಪಟ್ಟಿ ಮಾಡಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲು ತಿಳಿಸಲಾಗಿದೆ.
ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವುದು ಸೇರಿದಂತೆ ಪದೇ ಪದೆ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಬೇಕು. ಗ್ರಾಮದಲ್ಲಿಯೇ ಮಾಸ್ಕ್ ಹಾಗೂ ಸ್ಯಾನಿಟೈಸರ್ ತಯಾರಿಕೆಗೆ ಮಹಿಳಾ ಸ್ವಸಹಾಯ ಗುಂಪುಗಳಿಗೆ ತರಬೇತಿ ನೀಡಿ ಸ್ಥಳೀಯವಾಗಿಯೇ ಉತ್ಪಾದನೆ ಮಾಡಲು ಸೂಚಿಸಲಾಗಿದೆ.