ಬೆಂಗಳೂರು: ಸರ್ಕಾರದಿಂದ ಬಿಲ್ ಪಾವತಿಯಾಗದೇ ಕಂಗೆಟ್ಟಿರುವ ರಾಜ್ಯ ಗುತ್ತಿಗೆದಾರರು 30-40ರಷ್ಟು ಕಮಿಷನ್ ಆರೋಪದೊಂದಿಗೆ ರಾಜ್ಯಪಾಲರ ಬಾಗಿಲು ತಟ್ಟಿದ್ದಾರೆ. ಬಾಕಿ ಬಿಲ್ ಸಂಕಷ್ಟದಿಂದ ಕಾಪಾಡುವಂತೆ ಈ ಹಿಂದೆ ಪ್ರಧಾನಿ ಮೋದಿ, ರಾಜ್ಯದ ಶಾಸಕರಿಗೂ ಪತ್ರ ಬರೆದು ರಾಜ್ಯ ಗುತ್ತಿಗೆದಾರರ ಸಂಘ ಅಳಲು ತೋಡಿಕೊಂಡಿತ್ತು.
ನಿನ್ನೆ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನ ಭೇಟಿಯಾಗಿ ರಾಜ್ಯ ಗುತ್ತಿಗೆದಾರರ ಸಂಘದ ಪ್ರತಿನಿಧಿಗಳು ರಾಜ್ಯದಲ್ಲಿ ನಡೆಯುತ್ತಿರುವ ಕಮಿಷನ್ ವ್ಯವಹಾರದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿವಿಧ ಇಲಾಖೆಯಿಂದ ಕೋಟ್ಯಂತರ ರೂ. ಬಿಲ್ ಬಾಕಿ ಇದ್ದು, ಅದರ ಪಾವತಿಗಾಗಿ 30-40ರಷ್ಟು ಕಮಿಷನ್ ನೀಡಬೇಕಾದ ಪರಿಸ್ಥಿತಿ ಇದೆ ಎಂದು ಗಂಭೀರ ಆರೋಪ ಮಾಡಿದ್ದರು.
ರಾಜ್ಯಪಾಲರಿಗೆ ನೀಡಿದ ದೂರಲ್ಲೇನಿತ್ತು?
ವಿವಿಧ ಇಲಾಖೆಗಳು ಗುತ್ತಿಗೆದಾರರಿಗೆ 22,000 ಕೋಟಿ ರೂ. ಬಿಲ್ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿದೆ. ಪ್ರಮುಖವಾಗಿ ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ ಮತ್ತು ಬಿಬಿಎಂಪಿಯಲ್ಲಿ ಬೃಹತ್ ಕಾಮಗಾರಿ ಕೈಗೊಳ್ಳಲಾಗಿದ್ದು, ಒಟ್ಟು 10,000 ಕೋಟಿ ರೂ. ಅಧಿಕ ಮೊತ್ತದ ಕಾಮಗಾರಿಗಳು ಪೂರ್ಣವಾಗಿದೆ. ಲೋಕೋಪಯೋಗಿ ಇಲಾಖೆ 5,000 ಕೋಟಿ ರೂ., ನೀರಾವರಿ ಇಲಾಖೆ 8,000 ಕೋಟಿ ರೂ., ಬಿಬಿಎಂಪಿ 3,000 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಕೋವಿಡ್ ಹಿನ್ನೆಲೆ ಎಲ್ಲಾ ಇಲಾಖೆಗಳು ಕಳೆದ ಎರಡು ವರ್ಷದಿಂದ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡುತ್ತಿಲ್ಲ. ಮುಂಬರುವ ಕಾಮಗಾರಿ, ಚಾಲ್ತಿ ಕಾಮಗಾರಿ ಮತ್ತು ಪೂರ್ಣಗೊಂಡ ಕಾಮಗಾರಿ ಮೇಲೆ ಎಲ್ಲಾ ಇಲಾಖೆಗಳು ಪ್ರತ್ಯೇಕ ಬಜೆಟ್ ಸಿದ್ಧಪಡಿಸಬೇಕೆಂಬುದು ನಮ್ಮ ಆಗ್ರಹ ಎಂದು ಹೇಳಿದ್ದಾರೆ.
ಬಿಲ್ ಪಾವತಿಸಲು ಇಲಾಖೆಗಳಿಗೆ ವಿವಿಧ ಹಂತಗಳಲ್ಲಿ 30-40ರಷ್ಟು ಕಮಿಷನ್ ಕೊಡಬೇಕಾಗಿದೆ. ಇದರಿಂದ ಕಾಮಗಾರಿ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಈ ಭ್ರಷ್ಟಾಚಾರದಿಂದ ಗುತ್ತಿಗೆದಾರರು ಕೆಂಗೆಟ್ಟು ಹೋಗಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಪ್ರಧಾನಿಗೆ ನೀಡಿದ ದೂರಿನಲ್ಲೂ ಲಂಚದ ಆರೋಪ:
ಪ್ರಧಾನಿ ಮೋದಿಗೂ ರಾಜ್ಯ ಗುತ್ತಿಗೆದಾರರ ಸಂಘ ಜುಲೈನಲ್ಲೇ ಪತ್ರ ಬರೆದು ಕರ್ನಾಟಕದಲ್ಲಿ ನಡೆಯುತ್ತಿರುವ ಲಂಚಾವತಾರದ ಬಗ್ಗೆ ವಿವರವಾಗಿ ಬಿಚ್ಚಿಟ್ಟಿದೆ.
ಇಲಾಖೆಯ ಕೆಲ ಸಚಿವರು ಟೆಂಡರ್ ಮಂಜೂರಾಗುವ ಮುನ್ನವೇ 5ರಷ್ಟು ಲಂಚ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ. ಕೆಲ ಸಂಸದರೂ ಕಾಮಗಾರಿ ಕೆಲಸ ಪ್ರಾರಂಭಿಸುವ ಮುನ್ನ 2ರಷ್ಟು ಟೆಂಡರ್ ಮೊತ್ತವನ್ನು ಲಂಚವಾಗಿ ನೀಡಲು ಒತ್ತಾಯಿಸುತ್ತಾರೆ. ಇನ್ನು, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಚುನಾಯಿತ ಪ್ರತಿನಿಧಿಗಳು ರಸ್ತೆ ಕಾಮಗಾರಿ ಟೆಂಡರ್‌ಗಾಗಿ 10ರಷ್ಟು, ಕಟ್ಟಡ ಕಾಮಗಾರಿ ಟೆಂಡರ್‌ಗಾಗಿ 5ರಷ್ಟು ಕಮಿಷನ್ ಕೇಳುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕೆಟಿಪಿಪಿ ಕಾಯ್ದೆಯಡಿ 4ಜಿ ವಿನಾಯಿತಿ ಇದೆ ಎಂದು ಟೆಂಡರ್ ಕರೆಯದೇ ಸರ್ಕಾರ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಮತ್ತು ನಿರ್ಮಿತಿ ಕೇಂದ್ರಗಳಿಗೆ ಕಾಮಗಾರಿಯನ್ನು ವಹಿಸುತ್ತಿದೆ. ಈ ಕಾಮಗಾರಿಗಳನ್ನು ಜನಪ್ರತಿನಿಧಿಗಳ ನಿಕಟವರ್ತಿ ನೋಂದಾವಣೆಗೊಳ್ಳದ ಗುತ್ತಿಗೆದಾರರಿಗೆ ವಹಿಸಲಾಗುತ್ತಿದೆ. ಅಲ್ಲೂ 10ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ನೆರೆ ರಾಜ್ಯ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗುತ್ತಿದೆ. ಕಾಮಗಾರಿ ಪ್ರಾರಂಭಿಸುವ ಮುನ್ನ ಗುತ್ತಿಗೆದಾರರಿಗೆ ಜನಪ್ರತಿನಿಧಿಗಳು, ಇತರರಿಗೆ 25-30ರಷ್ಟು ಕಮಿಷನ್ ನೀಡಬೇಕಾದ ಪರಿಸ್ಥಿತಿ ಇದೆ. ಇನ್ನು ಬಾಕಿ ಬಿಲ್ ಪಾವತಿಸಬೇಕಾದರೆ ಲೆಟರ್ ಆಫ್ ಕ್ರೆಡಿಟ್‌ಗೆ 5-6ರಷ್ಟು ಮತ್ತೆ ಕಮಿಷನ್ ಪಾವತಿಸಬೇಕಾಗಿದೆ ಎಂದು ಆರೋಪಿಸಿದ್ದಾರೆ.
ಅಧಿವೇಶನದಲ್ಲಿ ಪ್ರಸ್ತಾಪಿಸಲು ಮನವಿ:
ಗುತ್ತಿಗೆದಾರರ ಸಂಘ ತಮ್ಮ ಸಂಕಷ್ಟದ ಬಗ್ಗೆ ಅಧಿವೇಶನದಲ್ಲೂ ಪ್ರಸ್ತಾಪಿಸುವಂತೆ ಶಾಸಕರುಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ವಿವಿಧ ಇಲಾಖೆಗಳು ಗುತ್ತಿಗೆದಾರರಿಗೆ ಸುಮಾರು 17,000 ಕೋಟಿ ರೂ.ಗಳಿಗೂ ಹೆಚ್ಚು ಬಾಕಿ ಉಳಿಸಿಕೊಂಡಿದೆ. ನಿರಂತರವಾಗಿ ಮುಖ್ಯಮಂತ್ರಿ, ವಿವಿಧ ಇಲಾಖೆಗಳ ಸಚಿವರು, ಮುಖ್ಯ ಕಾರ್ಯದರ್ಶಿಗಳು ಮತ್ತು ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಡುತ್ತಾ ಬರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಮುಂಬರುವ ಆಧಿವೇಶನದಲ್ಲಿ ಪ್ರಶೋತ್ತರ, ಶೂನ್ಯವೇಳೆ ಅರ್ಧ ಗಂಟೆ ಕಾಲಾವಧಿಯ ಚರ್ಚೆ ಸೇರಿದಂತೆ ಯಾವುದಾದರೊಂದು ರೂಪದಲ್ಲಿ ಪ್ರಸ್ತಾಪಿಸಿ ಗುತ್ತಿಗೆದಾರರು ಮತ್ತು ಅವರನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅವಲಂಬಿಸಿರುವ ಲಕ್ಷಾಂತರ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬೇಕೆಂದು ಕೋರಿದ್ದಾರೆ.