ಬೆಂಗಳೂರು : ಫ್ಲಿಪ್ಕಾರ್ಟ್ ತನ್ನ ಪ್ಲಾಟ್ಫಾರ್ಮ್ಗೆ ತಮಿಳು, ತೆಲುಗು ಮತ್ತು ಕನ್ನಡ ಭಾಷೆಯನ್ನು ಸೇರ್ಪಡೆ ಮಾಡಿದೆ. ಈ ಮೂಲಕ ಆನ್‌ಲೈನ್ ಕಾಮರ್ಸ್ನಲ್ಲಿ ಭಾರತೀಯ ಭಾಷೆ ಬಳಕೆದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿದೆ. ಇ-ಕಾಮರ್ಸ್ನಲ್ಲಿ ಸ್ಥಳೀಯ ಭಾಷೆ ಮಾತನಾಡುವವರಿಗೆ ಇದ್ದ ಅಡೆತಡೆಗಳನ್ನು ಈ ವ್ಯವಸ್ಥೆ ತೊಡೆದು ಹಾಕಲಿದೆ. ಕಳೆದ ವರ್ಷ ಹಿಂದಿ ಭಾಷೆ ಅಳವಡಿಸಲಾಗಿದ್ದು, ಫ್ಲಿಪ್ಕಾರ್ಟ್ನ ಲೋಕಲೈಸೇಶನ್ ಅಂಡ್ ಟ್ರಾನ್ಸ್ಲೇಶನ್ ಪ್ಲಾಟ್‌ಫಾರ್ಮ್ ಮೂಲಕ ಈ ಸೌಲಭ್ಯ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಇ-ಕಾಮರ್ಸ್‌ನ ಜರ್ನಿಯನ್ನು ತಮ್ಮದೇ ಭಾಷೆಯಲ್ಲಿ ಪರಿಪೂರ್ಣಗೊಳಿಸಿಕೊಳ್ಳಲು ಗ್ರಾಹಕರನ್ನು ಸಬಲರನ್ನಾಗಿ ಮಾಡಲಾಗುತ್ತಿದೆ.
ಇ-ಕಾಮರ್ಸ್ ವ್ಯವಸ್ಥೆಯಲ್ಲಿ ಗ್ರಾಹಕರು ಎದುರಿಸುತ್ತಿರುವ ವಿವಿಧ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈ ಸ್ಟೇಟ್-ಆಫ್-ಆರ್ಟ್ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸಿ ಮೂರು ಪ್ರಾದೇಶಿಕ ಭಾಷೆಗಳನ್ನು ಪರಿಚಯಿಸಲಾಗಿದೆ. ಉದ್ಯಮದ ವರದಿಗಳ ಪ್ರಕಾರ, 2021ರ ವೇಳೆಗೆ ಭಾರತೀಯ ಭಾಷೆಯ ಇಂಟರ್ನೆಟ್ ಬಳಕೆದಾರರ ಪ್ರಮಾಣ ಶೇ.75ರಷ್ಟಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಭಾಷೆಗಳ ಬಳಕೆದಾರರ ಪ್ರಮಾಣ ಹೆಚ್ಚುತ್ತಿದೆ. ವಿಶೇಷವಾಗಿ ಸಣ್ಣ ಸಣ್ಣ ಪಟ್ಟಣಗಳಲ್ಲಿ ಇದರ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಇ-ಕಾಮರ್ಸ್ ಲಭ್ಯವಾಗುವಂತೆ ಮಾಡುವ ಮೂಲಕ ಗ್ರಾಹಕರಿಗೆ ವೈಯಕ್ತಿಕ ಅನುಭವ ಹೆಚ್ಚಿಸುವುದು ಪ್ರಮುಖವಾಗಿದೆ. ಇದು ದೇಶದಲ್ಲಿ ಲಕ್ಷಾಂತರ ಗ್ರಾಹಕರು ತಮ್ಮದೇ ಭಾಷೆಗಳಲ್ಲಿ ಆನ್‌ಲೈನ್ ಶಾಪಿಂಗ್ ಅನುಭವ ಪಡೆಯಲು ಸಾಧ್ಯವಾಗುತ್ತಿದೆ.
ದಕ್ಷಿಣ ರಾಜ್ಯಗಳು ಫ್ಲಿಪ್ಕಾರ್ಟ್ಗೆ ಒಂದು ಪ್ರಮುಖ ಮಾರುಕಟ್ಟೆಯಾಗಿವೆ. ಇಲ್ಲಿ ಪ್ರಾದೇಶಿಕ ಭಾಷೆ ಅಳವಡಿಸಿಕೊಂಡರೆ ಇ-ಕಾಮರ್ಸ್ ವೇದಿಕೆಗೆ ಮತ್ತಷ್ಟು ಗ್ರಾಹಕರನ್ನು ಸೇರ್ಪಡೆ ಮಾಡಲು ಅನುಕೂಲವಾಗುತ್ತದೆ. ಬಳಕೆದಾರರ ಸಂಶೋಧನೆಗೆ ಹೊಸ ಭಾಷಾ ಸಂಪರ್ಕ ಸಾಧನಗಳು ಗ್ರಾಹಕರಿಗೆ ಶಾಪಿಂಗ್ನ ಆಕರ್ಷಕವಾಗಿ ಮಾಡಲು ಪದಗಳ ಭಾಷಾಂತರ ಮತ್ತು ಲಿಪ್ಯಂತರದ ನ್ಯಾಯಯುತ ಮಿಶ್ರಣವನ್ನು ಬಳಸುತ್ತದೆ. ಇದು ತಮ್ಮದೇ ಆದ ಭಾಷೆಯಲ್ಲಿ ವೇದಿಕೆಯೊಂದಿಗೆ ಸಂವಹನ ನಡೆಸಲು ಮತ್ತು ಖರೀದಿ ನಿರ್ಧಾರಗಳ ಸ್ವಾತಂತ್ರ್ಯವನ್ನು ಉತ್ತೇಜಿಸುತ್ತದೆ. ಇದಕ್ಕೆ ಪೂರಕ ವೇದಿಕೆಯನ್ನು ಅಭಿವೃದ್ಧಿಪಡಿಸಲು ತಂಡಕ್ಕೆ ನೆರವಾಗುವಂತಹ ಸಂಬಂಧಪಟ್ಟ ಒಳನೋಟಗಳನ್ನು ಪಡೆಯಲು ಹಲವಾರು ತಿಂಗಳ ಕಾಲ ಅಧ್ಯಯನ ನಡೆಸಿ ಅನುಷ್ಠಾನಕ್ಕೆ ತರಲಾಗಿದೆ.
ಭಾಷಿಕರ ಅಧ್ಯಯನದಲ್ಲಿ ಸೇಲಂ, ವಿಶಾಖಪಟ್ಟಣ ಮತ್ತು ಮೈಸೂರು ನಗರಗಳ ಜನರನ್ನು ಭಾಗಿದಾರರನ್ನಾಗಿಸಲಾಗಿತ್ತು. ಇಂತಹ ಸಭೆಗಳಲ್ಲಿ ಭಾಷೆ ಬಳಕೆ ಬಗ್ಗೆ ವ್ಯಕ್ತವಾದ ವೈವಿಧ್ಯಮಯ ಅಭಿಪ್ರಾಯಗಳನ್ನು ಸಂಗ್ರಹಿಸಿ ಕಾರ್ಯರೂಪಕ್ಕೆ ತರಲು ನೆರವಾದವು. ಉತ್ಪನ್ನಗಳ ವಿಶೇಷಣಗಳು, ಬ್ಯಾನರ್ಗಳು ಮತ್ತು ಪಾವತಿ ಪುಟಗಳು ಸೇರಿ ಇನ್ನಿತರೆ ವಿಚಾರಗಳಿಗೆ ಸಂಬಂಧಿಸಿದಂತೆ ಮೂರು ಭಾಷೆಗಳಲ್ಲಿ 5.4 ದಶಲಕ್ಷಕ್ಕೂ ಅಧಿಕ ಪದಗಳನ್ನು ಭಾಷಾಂತರ ಮಾಡಲಾಗಿದೆ.
ಫ್ಲಿಪ್ಕಾರ್ಟ್ ಗ್ರೂಪ್ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಲ್ಯಾಣ್ ಕೃಷ್ಣಮೂರ್ತಿ ಅವರು ಮಾತನಾಡಿ, ಈ ಹಿಂದಿನ ವರ್ಷದಲ್ಲಿ ನಾವು ಲಕ್ಷಾಂತರ ಗ್ರಾಹಕರನ್ನು ಇ-ಕಾಮರ್ಸ್ ಸೇರ್ಪಡೆಗೆಂದು ವಾಯ್ಸ್, ವಿಡಿಯೋ ಮತ್ತು ಸರಳ ಭಾಷೆಗೆ ಸಂಬಂಧಿಸಿದ ಬಹು ಪರಿಹಾರಗಳನ್ನು ಪರಿಚಯಿಸಿದ್ದೇವೆ. ಭಾಷೆಯ ತೊಡಕನ್ನು ಉತ್ತಮ ರೀತಿ ನಿವಾರಣೆ ಮಾಡಿದಲ್ಲಿ ತಲುಪದೇ ಇರುವ ಲಕ್ಷಾಂತರ ಗ್ರಾಹಕರನ್ನು ತಲುಪಲು ಸಾಕಷ್ಟು ಅವಕಾಶವನ್ನು ಹೊಂದಬಹುದೆಂಬ ವಿಶ್ವಾಸವನ್ನು ಹೊಂದಿದ್ದೇವೆ. ದೇಸಿಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ನಾವು ಭಾರತ ಮತ್ತು ಇದರ ವೈವಿಧ್ಯತೆಯನ್ನು ಅರ್ಥ ಮಾಡಿಕೊಂಡಿದ್ದೇವೆ.
ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಜತೆಯಲ್ಲಿ ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳನ್ನು ಪರಿಚಯಿಸುತ್ತಿರುವುದು ಒಂದು ಉತ್ತಮ ಹೆಜ್ಜೆ. ಈ ಮೂಲಕ ಇ-ಕಾಮರ್ಸ್‌ನ ಪ್ರಜಾಸತ್ತಾತ್ಮಕದೆಡೆಗೆ ಕೊಂಡೊಯ್ಯುವ ಗುರಿ ಹೊಂದಿದ್ದೇವೆ’’ ಎಂದು ತಿಳಿಸಿದರು. 9 ತಿಂಗಳ ಹಿಂದೆ ಹಿಂದಿಯನ್ನು ಪರಿಚಯಿಸಿದ ಬೆನ್ನಲ್ಲೇ ಫ್ಲಿಪ್ಕಾರ್ಟ್ನಲ್ಲಿ ಮೂರು ಹೊಸ ಭಾಷೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಫ್ಲಿಪ್ಕಾರ್ಟ್ನ ಇಂಜಿನಿಯರ್ಗಳು ಯುಐ ಮತ್ತು ಪ್ಲಾಟ್‌ಫಾರ್ಮ್ ಆರ್ಕಿಟೆಕ್ಚರ್ಗೆ ಸಂಬಂಧಿಸಿದ ಬಹು ತಾಂತ್ರಿಕ ಸವಾಲುಗಳನ್ನು ಬಗೆಹರಿಸುವಲ್ಲಿ ಶ್ರಮಿಸಿದ್ದಾರೆ.