ಬೆಂಗಳೂರು: ಪ್ರಥಮ ಪಿಯು ಪೂರಕ ಪರೀಕ್ಷೆ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸಜ್ಜಾಗಿದ್ದು, ಜುಲೈ 16ರಿಂದ 27ರ ತನಕ ಪರೀಕ್ಷಾ ದಿನಾಂಕ ನಿಗದಿಯಾಗಿದೆ. 2019-20ನೇ ಸಾಲಿನಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ.
ಆಯಾ ಕಾಲೇಜು ಹಂತದಲ್ಲಿ ಪರೀಕ್ಷೆ ನಡೆಸುವಂತೆ ಪಿಯು ಬೋರ್ಡ್ ಸೂಚಿಸಿದ್ದು, ಕೋವಿಡ್-19 ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪರೀಕ್ಷೆ ನಡೆಸಲು ಸೂಚಿಸಿದೆ. ದ್ವಿತೀಯ ಪಿಯು ಪರೀಕ್ಷೆ ನಡೆಸಿದ ಮಾದರಿಯಲ್ಲಿ ಪೂರಕ ಪರೀಕ್ಷೆ ನಡೆಸುವಂತೆ ಕಾಲೇಜುಗಳಿಗೆ ಸೂಚಿಸಲಾಗಿದೆ. ಒಂದು ವೇಳೆ ಮಾರ್ಗಸೂಚಿ ಉಲ್ಲಂಘನೆ ಮಾಡಿದರೆ ಶಿಸ್ತು ಕ್ರಮ ಜಾರಿ ಮಾಡುವ ಎಚ್ಚರಿಕೆ ನೀಡಿದೆ.
ಪರೀಕ್ಷಾ ಶುಲ್ಕ, ಶುಲ್ಕ ಪಾವತಿಸುವ ಅವಧಿ, ಪರೀಕ್ಷೆ ದಿನಾಂಕಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿಯನ್ನು ಸಕಾಲದಲ್ಲಿ ನೀಡುವುದು. ಬೋಧಕ-ಬೋಧಕೇತರ ಸಿಬ್ಬಂದಿಯನ್ನು ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗಲು ಸೂಚಿಸುವುದು. ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ವಿತರಿಸುವಾಗ, ವಾಪಸ್ ಪಡೆಯುವಾಗ ಪ್ಯಾಕೇಟ್ಗಳನ್ನು ಪ್ಯಾಕಿಂಗ್ ಮಾಡುವ ವೇಳೆ ಸ್ಯಾನಿಟೈಸ್ ಮೂಲಕ ಕೈಗಳನ್ನು ಸ್ವಚ್ಛಗೊಳಿಸುವಂತೆಯೂ ತಿಳಿಸಲಾಗಿದೆ.
ಪೂರಕ ಪರೀಕ್ಷೆಗೆ ಒಂದು ವಿಷಯಕ್ಕೆ 101 ರೂ., ಎರಡು ವಿಷಯಗಳಿಗೆ 201, ಮೂರು ಮತ್ತು ಹೆಚ್ಚಿನ ವಿಷಯಗಳಿಗೆ 302 ರೂ. ನಿಗದಿ ಮಾಡಲಾಗಿದೆ. ಜುಲೈ 8ರಿಂದ 14ರವರೆಗೆ ಪರೀಕ್ಷಾ ಶುಲ್ಕ ಪಾವತಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಶುಲ್ಕ ಪಾವತಿ ನಿಗದಿತ ಅವಧಿಯಲ್ಲಿ ಸಾಧ್ಯವಾಗದಿದ್ದರೆ ಪರೀಕ್ಷಾ ದಿನಗಳಂದು ಶುಲ್ಕ ಪಾವತಿಗೆ ಅವಕಾಶ ನೀಡಲಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಒತ್ತಾಯ ಮಾಡುವಂತಿಲ್ಲ.
ಕಡ್ಡಾಯವಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು
- ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಕಾಲೇಜುಗಳನ್ನು ಸೋಂಕು ನಿವಾರಕ ದ್ರಾವಣದಿಂದ ಸ್ವಚ್ಛಗೊಳಿಸುವುದು.
- ವಿದ್ಯಾರ್ಥಿಗಳು ಕಾಲೇಜಿನ ಒಳಗಡೆ ಸಾಮಾಜಿಕ ಅಂತರದಲ್ಲಿ ಪ್ರವೇಶಿಸುವಂತೆ ಬ್ಲಾಕ್ಸ್ ನಿರ್ಮಾಣ ಮಾಡುವುದು.
- ವಿದ್ಯಾರ್ಥಿಗಳಾಲಿ, ಪೋಷಕರಾಗಲಿ ಕಾಲೇಜಿನ ಸುತ್ತಮುತ್ತ ಗುಂಪು ಸೇರದಂತೆ ನೋಡಿಕೊಳ್ಳುವುದು.
- ಕಾಲೇಜಿನಲ್ಲಿ ಕಡ್ಡಾಯವಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಮಾಸ್ಕ್ ಧರಿಸುವುದು.
- ಕಂಟೈನ್ಮೆಂಟ್ ವಲಯದಿಂದ ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡುವುದು.
- ಥರ್ಮಲ್ ಸ್ಕ್ಯಾನರ್ ಮೂಲಕ ಪ್ರತಿ ವಿದ್ಯಾರ್ಥಿಯ ಆರೋಗ್ಯ ತಪಾಸಣೆ ಮಾಡುವುದು ಸೇರಿದಂತೆ ಹಲವು ಮುನ್ನೇಚ್ಚರಿಕಾ ಕ್ರಮಗಳನ್ನು ಸೂಚಿಸಿದೆ.