ಬೆಂಗಳೂರು: ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮೊದಲ ದಿನವಾದ ಇಂದು ಒಟ್ಟು 6 ಅಭ್ಯರ್ಥಿಗಳಿಂದ 7 ನಾಮಪತ್ರ ಸಲ್ಲಿಕೆ ಆಗಿದೆ.
ಉಪಚುನಾವಣೆಗೆ ಕೋರ್ಟ್ ತಡೆಯಾಜ್ಞೆ ನೀಡುವುದಕ್ಕಿಂತ ಮುನ್ನ ಸಲ್ಲಿಕೆಯಾಗಿದ್ದ 29 ಅಭ್ಯರ್ಥಿಗಳ 29 ನಾಮಪತ್ರಗಳ ಜೊತೆ ಇಂದು ನೀಡಿಕೆ ಆದ ನಾಮಪತ್ರಗಳು ಸೇರಿದರೆ ಒಟ್ಟು 35 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ ಆದಂತಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ ಒಟ್ಟು ಏಳು ಪಕ್ಷಗಳ ಅಭ್ಯರ್ಥಿಗಳು ಇದುವರೆಗೂ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ರಾಷ್ಟ್ರೀಯ ಕಾಂಗ್ರೆಸ್ನಿಂದ 15, ಉತ್ತಮ ಪ್ರಜಾಕೀಯ ಪಕ್ಷದಿಂದ 3, ಜೆಡಿಎಸ್, ಭಾರತೀಯ ಜನತಾ ಪಕ್ಷ, ಕಮ್ಯುನಿಸ್ಟ್ ಪಕ್ಷ ರಿಪಬ್ಲಿಕ್ ಸೇನಾ ಪಾರ್ಟಿ ಹಾಗೂ ಹಿಂದುಸ್ತಾನ ಜನತಾ ಪಾರ್ಟಿ ಇಂದ ತಲಾ 1 ನಾಮಪತ್ರ ಸಲ್ಲಿಕೆ ಆಗಿವೆ. ಕ್ಷೇತ್ರವಾರು ಪತ್ರ ಸಲ್ಲಿಕೆ ಗಮನಿಸಿದರೆ ಅಥಣಿಯಿಂದ 6 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಆಗಿದೆ. ಉಳಿದಂತೆ ಕಾಗವಾಡದಿಂದ 5, ಗೋಕಾಕ್ನಿಂದ 2, ಯಲ್ಲಾಪುರದಿಂದ 4, ಹಿರೇಕೆರೂರಿನಿಂದ ಯಾವುದೇ ನಾಮಪತ್ರ ಸಲ್ಲಿಕೆ ಆಗಿಲ್ಲ. ರಾಣೆಬೆನ್ನೂರಿನಿಂದ ಒಂದು, ವಿಜಯನಗರದಿಂದ 3, ಚಿಕ್ಕಬಳ್ಳಾಪುರದಿಂದ ಒಂದು, ಯಶವಂತಪುರದಿಂದ 4, ಕೆಆರ್ ಪುರ ದಿಂದ 4 ನಾಮಪತ್ರ ಸಲ್ಲಿಕೆಯಾಗಿದ್ದು, ಮಹಾಲಕ್ಷ್ಮಿಲೇಔಟ್ ಹಾಗೂ ಹೊಸಕೋಟೆಯಿಂದ ಯಾವುದೇ ನಾಮಪತ್ರ ಸಲ್ಲಿಕೆ ಆಗಿಲ್ಲ. ಶಿವಾಜಿನಗರದಿಂದ 2, ಕೃಷ್ಣರಾಜಪೇಟೆ ಇಂದ ಒಂದು ಹಾಗೂ ಹುಣಸೂರಿನಿಂದ ಎರಡು ನಾಮಪತ್ರ ಸಲ್ಲಿಕೆ ಆಗಿವೆ.
ಜೆಡಿಎಸ್ನಿಂದ ಏಕೈಕ ನಾಮಪತ್ರ ವಿಜಯನಗರದಿಂದ ಸಲ್ಲಿಕೆಯಾಗಿದೆ. ರಿಪಬ್ಲಿಕ್ ಸೇನಾ ಪಕ್ಷದ ಅಭ್ಯರ್ಥಿ ಶಿವಾಜಿನಗರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಯಾರು?
ಅನರ್ಹ ಶಾಸಕರಿಗೆ ಬೆಂಬಲ ನೀಡಿರುವ ಬಿಜೆಪಿಯಿಂದ ನಾಮಪತ್ರ ಸಲ್ಲಿಕೆ ಮಾಡಿರುವ ಅಭ್ಯರ್ಥಿ ಯಾರು ಎಂದು ಗಮನಿಸಿದರೆ, ಯಶವಂತಪುರದಿಂದ ದೀಪಕ್ ಉರುಫ್ ಶ್ರೀ ವೆಂಕಟೇಶ್ವರ ಮಹಾಸ್ವಾಮೀಜಿ ಏಕೈಕ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.