ಬೆಂಗಳೂರು: ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿನ 10,265 ಕೋಟಿ ರೂ.ಗಳ ಪೂರಕ ಅಂದಾಜಿನ 'ಕರ್ನಾಟಕ ಧನ ವಿನಿಯೋಗ ವಿಧೇಯಕ'ವನ್ನು ವಿಧಾನ ಪರಿಷತ್ನಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಶಾಸನ ರಚನೆ ಕಲಾಪದಲ್ಲಿ 'ಕರ್ನಾಟಕ ಧನ ವಿನಿಯೋಗ ವಿಧೇಯಕ' ಮಂಡನೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 2020-21ನೇ ಸಾಲಿನ ಮೊದಲ ಪೂರಕ ಅಂದಾಜು ಮಂಡನೆ ಮಾಡುತ್ತಿದ್ದೇನೆ. 10,265 ಕೋಟಿ ರೂ.ಗಳ ಪೂರಕ ಅಂದಾಜು ಮಂಡಿಸಿದ್ದು, 8,728 ಕೋಟಿ ರೂ. ರಾಜಸ್ವ, 1,536 ಕೋಟಿ ರೂ. ಬಂಡವಾಳ ಖಾತೆಯಿಂದ ಭರಿಸಲಾಗುತ್ತದೆ. ಕ್ಯಾಶ್ ಔಟ್ ಫ್ಲೋ (ಹೊರ ಹರಿವು) 6,367 ಕೋಟಿ ರೂ.ಗಳಾಗಿದ್ದು, ಪೂರಕ ಅಂದಾಜು ಆಯವ್ಯಯ ಗಾತ್ರದ ಶೇ. 4.16 ರಷ್ಟಾಗಿರಲಿದೆ ಎಂದು ವಿವರಣೆ ನೀಡಿದರು.
ವಿವಿಧ ಯೋಜನೆಗಳಿಗೆ ಕೇಂದ್ರದಿಂದ 3,898 ಕೋಟಿ ರೂ. ಬರಲಿದೆ. ಉಳಿದ 6,367 ಕೋಟಿ ರೂ. ನೆಟ್ ಫ್ಲೋ ನಮ್ಮದೆ ಇರಲಿದೆ. ಜಲ ಜೀವನ್ ಮಿಷನ್, ಕೊರೊನಾ ನಿಯಂತ್ರಣ, ಆಹಾರ ವಿತರಣೆ ಸೇರಿ ಮೂರು ಖಾತೆಗಳಿಗೆ 6 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ.
ಕೇಂದ್ರದ ಜಿಎಸ್ಟಿ ಮರು ಪಾವತಿಗೆ 12,708 ಕೋಟಿ ರೂ.ಸಿಗಲಿದೆ ಎಂದು ಬಜೆಟ್ನಲ್ಲಿ ಅಂದಾಜು ಮಾಡಿದ್ದೆವು. ಆದರೆ 18,109 ಕೋಟಿ ರೂ. ನೀಡುವುದಾಗಿ ಕೇಂದ್ರ ತಿಳಿಸಿದೆ. 6 ಸಾವಿರ ಕೋಟಿ ಹೆಚ್ಚು ಬರಲಿದೆ. ಈಗಾಗಲೇ 8 ಸಾವಿರ ಕೋಟಿಯಷ್ಟು ಹಣ ಬಿಡುಗಡೆ ಆಗಿದೆ ಎಂದು ಹಣಕಾಸು ವಿಧೇಯಕದ ಕುರಿತು ಸಿಎಂ ವಿವರಣೆ ನೀಡಿದರು.
ಹಣಕಾಸು ಬಿಲ್ ಕುರಿತು ಪ್ರತಿಪಕ್ಷ ಸದಸ್ಯರು ಕೆಲ ಸ್ಪಷ್ಟೀಕರಣ ಬಯಸಿದ್ದು, ಅದಕ್ಕೂ ಸಿಎಂ ಬೊಮ್ಮಾಯಿ ವಿವರಣೆ ನೀಡಿದರು. ಹಣಕಾಸು ಲಭ್ಯತೆ ಆಧಾರದಲ್ಲಿ ಕೆಲ ಯೋಜನೆಗೆ ಹಣ ಒದಗಿಸುವ ಭರವಸೆ ನೀಡಿದರು. ವಿಧೇಯಕದ ಮೇಲೆ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ, ಪಿ.ಆರ್. ರಮೇಶ್, ಶ್ರೀಕಂಠೇಗೌಡ ಚರ್ಚೆ ನಡೆಸಿದರು. ಅದಕ್ಕೆ ಸಿಎಂ ವಿವರಣೆ ನೀಡಿದರು.
ಇದನ್ನೂ ಓದಿ: ಆರ್ಥಿಕ ಶಿಸ್ತು ತರಲು ಅಪ್ರಿಯವಾದರೂ ಕಠಿಣ ಕ್ರಮ ಕೈಗೊಳ್ಳಲಿದ್ದೇನೆ: ಸಿಎಂ ಬೊಮ್ಮಾಯಿ