ಹ್ಯಾಟ್ರಿಕ್ ಹೀರೊ ಸುನಿಲ್ಕುಮಾರ್ಗೆ ಸಚಿವ ಸ್ಥಾನ.. - karnataka cabinet oath
ಸರ್ಕಾರದ ಮುಖ್ಯ ಸಚೇತಕರಾಗಿ ಹಾಗೂ ಕೇರಳದ ಬಿಜೆಪಿ ಸಹ ಉಸ್ತುವಾರಿಯಾಗಿ ಕೆಲಸ ಮಾಡಿರುವ ಇವರು, ವೃತ್ತಿಯಲ್ಲಿ ವ್ಯಾಪಾರ ಹಾಗೂ ಕೃಷಿಕರಾಗಿದ್ದಾರೆ. ಈವರೆಗೂ ಕೋಟ ಶ್ರೀನಿವಾಸ್ ಪೂಜಾರಿ ಸಚಿವರಾಗಿದ್ದ ಹಿನ್ನೆಲೆ ಅವರಿಗೆ ಸಚಿವ ಸ್ಥಾನ ಕೈತಪ್ಪಲಿದೆ ಎನ್ನಲಾಗುತ್ತಿತ್ತು. ಆದರೆ, ಈ ಬಾರಿ ಉಡುಪಿ ಜಿಲ್ಲೆ ಜೊತೆ ಸುನಿಲ್ ಕುಮಾರ್ ಸೇರ್ಪಡೆಯಾಗಿದ್ದು, ಡಬಲ್ ಧಮಾಕಾ ದೊರಕಿದೆ..
ಬೆಂಗಳೂರು : ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಸತತ 3 ಬಾರಿ ಗೆಲುವು ಸಾಧಿಸಿದ್ದ ವಿ.ಸುನಿಲ್‌ಕುಮಾರ್ ಅವರಿಗೆ ಸಚಿವ ಪಟ್ಟ ಒಲಿದು ಬಂದಿದೆ. ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಸುನಿಲ್ ಕುಮಾರ್ಗೆ ಅವಕಾಶ ಲಭಿಸಿದೆ. ಬಿಲ್ಲವ ಸಮುದಾಯದ ಪ್ರತಿನಿಧಿ 45 ವರ್ಷದ ಬಿಎ ಪದವೀಧರರಾದ ಅವರು ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸುನಿಲ್ ಕುಮಾರ್ 2004, 2013 ಹಾಗೂ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಅಭ್ಯರ್ಥಿ ಗೋಪಾಲ್ ಭಂಡಾರಿ ವಿರುದ್ಧ ಸತತ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಹಿಂದೆ ಬಿ ಎಸ್ ಯಡಿಯೂರಪ್ಪ ಸಂಪುಟದಲ್ಲಿ ಇವರಿಗೆ ಸ್ಥಾನ ಸಿಗುವ ನಿರೀಕ್ಷೆಯಿತ್ತು. ಮೊದಲ ಬಾರಿಗೆ ಸಚಿವರಾದ ಅನುಭವ ಹೊಂದಿದ್ದಾರೆ.
ಸರ್ಕಾರದ ಮುಖ್ಯ ಸಚೇತಕರಾಗಿ ಹಾಗೂ ಕೇರಳದ ಬಿಜೆಪಿ ಸಹ ಉಸ್ತುವಾರಿಯಾಗಿ ಕೆಲಸ ಮಾಡಿರುವ ಇವರು, ವೃತ್ತಿಯಲ್ಲಿ ವ್ಯಾಪಾರ ಹಾಗೂ ಕೃಷಿಕರಾಗಿದ್ದಾರೆ. ಈವರೆಗೂ ಕೋಟ ಶ್ರೀನಿವಾಸ್ ಪೂಜಾರಿ ಸಚಿವರಾಗಿದ್ದ ಹಿನ್ನೆಲೆ ಅವರಿಗೆ ಸಚಿವ ಸ್ಥಾನ ಕೈತಪ್ಪಲಿದೆ ಎನ್ನಲಾಗುತ್ತಿತ್ತು. ಆದರೆ, ಈ ಬಾರಿ ಉಡುಪಿ ಜಿಲ್ಲೆ ಜೊತೆ ಸುನಿಲ್ ಕುಮಾರ್ ಸೇರ್ಪಡೆಯಾಗಿದ್ದು, ಡಬಲ್ ಧಮಾಕಾ ದೊರಕಿದೆ.
ಸುನಿಲ್‌ಕುಮಾರ್ ಹಿನ್ನೆಲೆ: ಉಡುಪಿ ಜಿಲ್ಲೆಯ ಎಂಕೆ ವಾಸುದೇವ್ ಹಾಗೂ ಕೆಪಿ ಪ್ರಮೋದ ದಂಪತಿಯ ಪುತ್ರನಾಗಿ 1975 ಆಗಸ್ಟ್ 15ರಂದು ಜನಿಸಿದ ಸುನಿಲ್ ಕುಮಾರ್ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಇವರ ರಾಜಕೀಯ ಬದುಕು ಆರಂಭಕ್ಕೂ ಮುನ್ನವೇ ವಿದ್ಯಾರ್ಥಿದೆಸೆಯಲ್ಲಿಯೇ ಎಬಿವಿಪಿ ಮೂಲಕ ಸಕ್ರಿಯವಾಗಿದ್ದರು.
ಬಜರಂಗದಳ ರಾಜ್ಯಾಧ್ಯಕ್ಷರಾಗಿ, ದತ್ತಪೀಠ ಚಳವಳಿಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದರು. ಯುವ ನಾಯಕನಾಗಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರಿಗೆ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಕೊನೆಗೂ ಸ್ಥಾನ ಲಭಿಸಿದೆ.
ಇದನ್ನೂ ಓದಿ: 29 ಸಚಿವರ ಪ್ರಮಾಣ : ಬೊಮ್ಮಾಯಿ ಸಂಪುಟ ಬಹುತೇಕ ಭರ್ತಿ