ಬೆಂಗಳೂರು: ಕೋವಿಡ್ ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಇದನ್ನು ಎಲ್ಲಾ ವಲಯಕ್ಕೂ ವಿಸ್ತರಿಸಿ ತನಿಖೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆರ್.ಟಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಮ್ಮ ಸಂಸದರು, ಶಾಸಕರು ಬೆಡ್ ಅಲಾಟ್ಮೆಂಟ್ ವಿಚಾರದಲ್ಲಿ ಲೋಪ ಆಗುತ್ತಿರುವುದು ಹಾಗೂ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದಾರೆ. ಜಯನಗರದಲ್ಲಿ ಬ್ರೇಕ್ ಆಗಿರುವ ಕೇಸ್ಅನ್ನು ಸಿಸಿಬಿಗೆ ವರ್ಗಾವಣೆ ಮಾಡಿದ್ದಾರೆ. ಸಿಸಿಬಿ ಸೊಮೋಟೊ ಕೇಸ್ ಹಾಕುತ್ತಿದೆ. ಇದು ಒಂದೇ ವಲಯದಲ್ಲಿ ಆಗಿರುವುದಲ್ಲ. ಎಲ್ಲಾ ವಲಯದಲ್ಲಿ ಆಗಿರಬಹುದು. ಹಾಗಾಗಿ, ನಮ್ಮ ತನಿಖೆಯನ್ನು ಎಲ್ಲಾ ವಲಯಕ್ಕೆ ವಿಸ್ತರಣೆ ಮಾಡುತ್ತೇವೆ. ಹಲವು ಜನರನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತೇವೆ ಎಂದರು.
ಕೋವಿಡ್ ಸಂಧರ್ಭದಲ್ಲಿ ಅರ್ಹರಿಗೆ ಬೆಡ್ ಕೊಡದೆ ಅಪಚಾರ ಮಾಡಿದ್ದಾರೆ. ಸಿಸಿಬಿ ಈಗಾಗಲೇ ಕಾರ್ಯಾಚರಣೆ ಮಾಡುತ್ತಿದೆ. ಇದರ ಹಿಂದೆ ಯಾರಿದ್ದಾರೆ ಅವರೆಲ್ಲರ ಮೇಲೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಭರವಸೆ ನೀಡಿದರು.
ಕೇಂದ್ರ ಸಚಿವ ಸಂಪುಟ ಸಭೆ ವಿಚಾರ ಮಾತನಾಡಿ, ನಮ್ಮ ಜನತಾ ಕರ್ಫ್ಯೂ 12ರ ವರೆಗೂ ಇದೆ. ಕೇಂದ್ರ ಸಚಿವ ಸಂಪುಟ ಸಭೆ ನಡೆಯುತ್ತಿದೆ. ಯಾವ ವಿಚಾರಕ್ಕೆ ನಡೆಯುತ್ತಿದೆ ಅನ್ನೋದು ಗೊತ್ತಿಲ್ಲ. ನೋಡೋಣ ನಿರ್ಧಾರ ಏನು ಬರಲಿದೆ ಅಂತ ನಂತರ ತೀರ್ಮಾನ ಮಾಡುತ್ತೇವೆ.
ಸಚಿವ ಸಂಪುಟದಲ್ಲಿ ಬೆಡ್ ಕೊರತೆ ನೀಗಿಸೋ ಜವಾಬ್ದಾರಿ ವಿಚಾರ ಕುರಿತು ಮಾತನಾಡಿ, ಸ್ಟ್ರೀಮ್ ಲೈನ್ ಮಾಡಿರೋ ಉದ್ದೇಶವೇ ಸಮಸ್ಯೆ ಬಗೆಹರಿಸುವುದು. ನಾನು ಅಶೋಕ್ ಸೇರಿ ಕೂತು ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ಇತ್ತರು.
ಓದಿ: ಬೆಡ್ ಬ್ಲಾಕಿಂಗ್ ದಂಧೆ ಬಯಲು ಬೆನ್ನಲ್ಲೇ ಬೆಂಗಳೂರಿನ ಆಸ್ಪತ್ರೆಗಳಲ್ಲಿ 3,210 ಬೆಡ್‌ಗಳು ಲಭ್ಯ!