ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಮಾರ್ಚ್ 12ರಿಂದ 16ರವರೆಗೆ ಪರೀಕ್ಷೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಫೆಬ್ರವರಿ 28ರಿಂದ http://kea.kar.nic.on ಜಾಲತಾಣದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ತಿಳಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.
ಮಾರ್ಚ್ 12ರಂದು ಮಧ್ಯಾಹ್ನ 2.30ರಿಂದ 4.30ರವರೆಗೆ ಸಾಮಾನ್ಯ ಜ್ಞಾನ ಕಡ್ಡಾಯ ಪ್ರಶ್ನೆ ಪತ್ರಿಕೆ 50 ಅಂಕಗಳಿಗೆ, 13ರಂದು ಬೆಳಿಗ್ಗೆ 10.30ರಿಂದ 12.30ರವರೆಗೆ ಕಡ್ಡಾಯ ಕನ್ನಡ ಪತ್ರಿಕೆ 100 ಅಂಕಗಳಿಗೆ, ಮಧ್ಯಾಹ್ನ 2.30ರಿಂದ 4.30ರವರೆಗೆ ಕಡ್ಡಾಯ ಇಂಗ್ಲಿಷ್ 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ.
ಇದನ್ನೂ ಓದಿ: ಇಂದು ಕಾಲೇಜು ಆರಂಭ: ಉಡುಪಿಯಲ್ಲಿ 700ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಉಳಿದಂತೆ, ತಲಾ 250 ಅಂಕಗಳುಳ್ಳ ಐಚ್ಛಿಕ ವಿಷಯಗಳ ಪರೀಕ್ಷೆ ನಡೆಯಲಿವೆ. ಮಾರ್ಚ್ 14ರಂದು ಬೆಳಿಗ್ಗೆ 10ರಿಂದ 1ರವರೆಗೆ ಕನ್ನಡ, ಉರ್ದು, ಸಸ್ಯಶಾಸ್ತ್ರ, ಭೂಗೋಳ ಮತ್ತು ಫ್ಯಾಷನ್ ಟೆಕ್ನಾಲಜಿ, 14ರ ಮಧ್ಯಾಹ್ನ 2ರಿಂದ 5ರವರೆಗೆ ರಾಜ್ಯಶಾಸ್ತ್ರ, ಮೈಕ್ರೋಬಯಾಲಜಿ ಮತ್ತು ಭೂಗರ್ಭಶಾಸ್ತ್ರ, 15ರಂದು ಬೆಳಿಗ್ಗೆ ಇತಿಹಾಸ, ಕಾಮರ್ಸ್, ಗಣಿತ ಮತ್ತು ಪ್ರಾಣಿಶಾಸ್ತ್ರ, 15ರ ಮಧ್ಯಾಹ್ನ ಅರ್ಥಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಇಂಗ್ಲಿಷ್ ಮತ್ತು ಸಮಾಜಕಾರ್ಯ, 16ರಂದು ಬೆಳಿಗ್ಗೆ ಶಿಕ್ಷಣ ಶಾಸ್ತ್ರ, ಹಿಂದಿ, ಕಂಪ್ಯೂಟರ್ ಸೈನ್ಸ್, ಕಾನೂನು ಮತ್ತು ಸ್ಟ್ಯಾಟಿಸ್ಟಿಕ್ಸ್, ಅದೇ ದಿನ ಮಧ್ಯಾಹ್ನ ಮ್ಯಾನೇಜ್ಮೆಂಟ್, ಬಯೋಕೆಮಿಸ್ಟ್ರಿ, ಎಲೆಕ್ಟ್ರಾನಿಕ್ಸ್ ಮತ್ತು ಸಮಾಜಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.