ಬೆಂಗಳೂರು : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ರಾಜ್ಯದ ಗಡಿಭಾಗದಲ್ಲಿರುವ ಹಾಗೂ ಕನ್ನಡಿಗರೇ ಹೆಚ್ಚಾಗಿರುವ ಕೇರಳದ ಕೆಲವು ಪ್ರದೇಶಗಳ ಹೆಸರು ಬದಲಾಯಿಸುವ ವಿಚಾರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಕರ್ನಾಟಕ ಮತ್ತು ಕೇರಳ ಯಾವಾಗಲೂ ಸೌಹಾರ್ದಯುತ ಬಾಳ್ವೆಯನ್ನು ಹಂಚಿಕೊಂಡು ಬಂದಿವೆ. ಸಾಮರಸ್ಯದಿಂದ ಸಹಬಾಳ್ವೆ ನಡೆಸುತ್ತಿವೆ. ನಮ್ಮ ರಾಜ್ಯಗಳ ಗಡಿ ಪ್ರದೇಶಗಳು ಕನ್ನಡಿಗರು ಮತ್ತು ಕೇರಳಿಗರು ಅನಾದಿ ಕಾಲದಿಂದಲೂ ಸಹೋದರ ಸಹೋದರಿಯರಂತೆ ಒಟ್ಟಿಗೆ ವಾಸಿಸುತ್ತಿದ್ದಾರೆ. ಆದರೆ, ಕಾಸರಗೋಡಿನ ಸ್ಥಳೀಯ ಸಂಸ್ಥೆಗಳು ಕಾಸರಗೋಡಿನ ಕೆಲವು ಹಳ್ಳಿಗಳ ಹೆಸರನ್ನು ಬದಲಾಯಿಸಲು ನಿರ್ಧಾರ ತೆಗೆದುಕೊಳ್ಳುತ್ತಿರುವುದು ವರದಿಯಾಗಿದೆ. ಅವರ ಹೆಸರುಗಳು ಕನ್ನಡ ಮತ್ತು ತುಳು ಭಾಷೆಗಳಿಂದ ಬಂದಿರುವುದಾಗಿದೆ. ಕೇರಳ ರಾಜ್ಯಕ್ಕೆ ಸೇರಿದ್ದರು ಸಹ ಕಾಸರಗೋಡಿನ ಜನರು ಕನ್ನಡದೊಂದಿಗೆ ವಿಶಿಷ್ಟ ಸಂಬಂಧವನ್ನು ಹೊಂದಿದ್ದಾರೆ. ಮತ್ತು ಹಳ್ಳಿಯ ಹೆಸರುಗಳೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಹಳ್ಳಿಗಳ ಮರು ಹೆಸರಿಸುವ ಯಾವುದೇ ಪ್ರಯತ್ನಗಳು ಅವರನ್ನು ನಿರಾಶೆಗೊಳಿಸುತ್ತವೆ ಮತ್ತು ಅವರ ತಾಯ್ನಾಡಿನಿಂದ ದೂರವಾಗಿದ್ದೇವೆ ಎಂಬ ಭಾವನೆಯನ್ನು ಮೂಡಿಸುತ್ತದೆ. ಸಾರ್ವತ್ರಿಕ ಭ್ರಾತೃತ್ವದ ಪ್ರಜ್ಞೆಯನ್ನು ಭಂಗಗೊಳಿಸಲು ಕೆಲವು ಸಾಮಾಜಿಕ ವಿರೋಧಿ ಅಂಶಗಳನ್ನು ಬಿಡದಿರುವುದು ಅತ್ಯಗತ್ಯ. ಗ್ರಾಮಗಳ ಮರುನಾಮಕರಣಕ್ಕೆ ಪ್ರಯತ್ನಿಸುವವರ ವಿರುದ್ಧ ಅಗತ್ಯ ಕ್ರಮಗಳನ್ನು ಪ್ರಾರಂಭಿಸಲಾಗುವುದು ಎಂದು ನಾನು ಭಾವಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಹೆಸರುಗಳನ್ನು ಬದಲಾಯಿಸಲು ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ ಎಂದು ಕಾಸರಗೋಡು ಜಿಲ್ಲಾಧಿಕಾರಿ ಸಜಿತ್ ಬಾಬು ಅವರ ಕಚೇರಿ ಮತ್ತು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರು ನೀಡಿದ ಸ್ಪಷ್ಟೀಕರಣವನ್ನು ನಾನು ಪ್ರಶಂಸಿಸುತ್ತೇನೆ. ಸಮಸ್ಯೆಯನ್ನು ಸರಳವಾಗಿ ಪರಿಹರಿಸಲು, ಅಧಿಕಾರಿಗಳೊಂದಿಗೆ ಮಾತನಾಡಲು ಮತ್ತು ಅಂತಹ ಪ್ರಯತ್ನಗಳು ಮತ್ತೆ ಆಗದಂತೆ ನೋಡಿಕೊಳ್ಳಬೇಕೆಂದು ನಾನು ತಮ್ಮಲ್ಲಿ ಕೋರುತ್ತೇನೆ ಎಂದಿದ್ದಾರೆ.
ಕಾಸರಗೋಡಿನ ಕನ್ನಡ ಶಾಲೆಗಳ ಮುಚ್ಚುವಿಕೆಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಂಡರೂ ಸಮಸ್ಯೆ ಎದುರಾಗಲಿದೆ. ಅನೇಕ ಕುಟುಂಬಗಳು ತಮ್ಮ ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಅಧ್ಯಯನ ಮಾಡಲಿ ಎಂದು ಬಯಸುತ್ತಾರೆ ಮತ್ತು ರಾಜ್ಯಗಳು ಇದನ್ನು ಪ್ರೋತ್ಸಾಹಿಸುವುದರಿಂದ ಭಾಷಾ ವೈವಿಧ್ಯತೆಯನ್ನು ಬಲಪಡಿಸಿದಂತೆ ಆಗುತ್ತದೆ. ಪ್ರಾದೇಶಿಕ ಅಸಮಾನತೆ ಉಂಟಾಗದಂತೆ ಕೇರಳ ಸರ್ಕಾರ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಿದೆ ಎಂದು ನಂಬಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ:ಕನ್ನಡದ ಗ್ರಾಮಗಳ ಹೆಸರು ಮಲಯಾಳಂಗೆ ಮರುನಾಮಕರಣ ನಿಲ್ಲಿಸಿ: ಕೇರಳ ಸಿಎಂಗೆ ಹೆಚ್ಡಿಕೆ ಪತ್ರ