ಬೆಂಗಳೂರು: ಪೆಟ್ರೋಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಮೇಲೆ ಪರಿಣಾಮ ಬೀರಿದೆ. ರೈತರು ಸೇರಿದಂತೆ ಎಲ್ಲ ವರ್ಗದವರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎರಡು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿರುವವರ ಬದುಕನ್ನು ಸರಿಪಡಿಸಬೇಕು ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಿಮಯ 69ರ ಅಡಿ ಮಾತನಾಡಿದ ಅವರು, ಬೆಲೆ ಏರಿಕೆ ನಿರಂತರ ಪ್ರಕ್ರಿಯೆಗಳಾಗಿದ್ದು, ಸ್ವಾತಂತ್ರ್ಯ ಬಂದಾಗಿನಿಂದಲೂ ಸರ್ಕಾರದ ಆರ್ಥಿಕ ಸುಧಾರಣೆಗಳನ್ನು ಮಾಡಿಕೊಳ್ಳಲು, ಯೋಜನೆಗಳ ಜಾರಿಗಾಗಿ ಬೆಲೆ ಏರಿಕೆ ಸಹಜವಾಗಿದೆ. ಆಡಳಿತ ಪಕ್ಷದ ಸರ್ಕಾರಗಳು ಬೆಲೆ ಏರಿಕೆ ಮಾಡುವ ಸಂದರ್ಭದಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ, ಹೋರಾಟ ಮಾಡುವುದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಡೆದು ಕೊಂಡು ಬಂದ ಪದ್ಧತಿ ಎಂದರು.
'ಜನರ ಸ್ಥಿತಿ ಎತ್ತಿನ ಬಂಡಿಯಂತಾಗಿದೆ'
ಪೆಟ್ರೋಲ್, ಡೀಸೆಲ್ ಗ್ಯಾಸ್ ಬೆಲೆ ಏರಿಕೆ ಗ್ರಾಹಕರು, ರೈತರು, ಶ್ರಮಿಕ ವರ್ಗಕ್ಕೂ ಹೊರೆಯಾಗಿದೆ. ಈ ಬಗ್ಗೆ ಸರ್ಕಾರ ಯೋಚಿಸಬೇಕು. ಈಗಿನ ಪರಿಸ್ಥಿತಿ ನೋಡಿದಾಗ ಕೃಷಿ ವಲಯದಲ್ಲಿ ಎತ್ತಿನ ಗಾಡಿಯ ಪರಿಸ್ಥಿಯಂತಾಗಿದೆ. ಎತ್ತುಗಳು ಬಂಡಿಯ ಬಾರವನ್ನು ಹೊತ್ತು ಸಾಗುತ್ತವೆ. ಬಂಡಿಯ ಭಾರ ಜಾಸ್ತಿ ಆದಾಗ ಎತ್ತುಗಳು ಮುಂದೆ ಸಾಗದಿದ್ದರೆ ಚಾಟಿ ಏಟು ಕೊಡುತ್ತೇವೆ. ಇದಕ್ಕೆ ಎತ್ತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇಂತಹ ಪರಿಸ್ಥಿತಿ ಇದೀಗ ಜನರದ್ದಾಗಿದೆ. ಜನರ ನಿತ್ಯ ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ ಎಂದು ಮಾಜಿ ಸಿಎಂ ವಿವವರಿಸಿದರು.
ರೈತರ ಬೆಳೆಗಳು ಸಂಪೂರ್ಣ ನಾಶವಾಗಿವೆ
ದೇಶದಲ್ಲಿ ಒಂದು ಕಡೆ ಕೋವಿಡ್, ಪ್ರವಾಹ ಪರಿಸ್ಥಿತಿ ಇತ್ತು. ನಮ್ಮ ರಾಜ್ಯದಲ್ಲೂ ಮುಂಗಾರು ಸಂದರ್ಭದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ರೈತರ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಹಲವಾರು ಮೂಲ ಸೌಲಭ್ಯಗಳ ಮೇಲೆ ಪರಿಣಾಮ ಬೀರಿದೆ. ತಕ್ಷಣವೇ ಸದನದ ಸಭೆ ಕರೆಯುವಂತೆ ಮನವಿ ಮಾಡಿದ್ದೆ.
ಕೆಲವು ದಿನ ಲಾಕ್‌ಡೌನ್ ನಿಂದ ಜನಸಾಮಾನ್ಯರ ಮೇಲೆ ಆಗಿರುವ ಪರಿಣಾಮಗಳು, ರಾಜ್ಯದಲ್ಲಿ ಸಾವಿರಾರು ಕುಟುಂಬಗಳಲ್ಲಿ ಸಾವು - ನೋವು ಆಗಿವೆ. ಜನ ಜೀವ ಉಳಿಸಿಕೊಳ್ಳಲು ಕುಟುಂಬದ ಆಸ್ತಿ ಮಾರಾಟ ಮಾಡಿದ್ದಾರೆ. ಇಂತಹ ವಿಚಾರಗಳ ಬಗ್ಗೆ ಚರ್ಚಿಸಲು ಕಲಾಪ ಕರೆಯುವಂತೆ ಮನವಿ ಮಾಡಿದ್ದೆ ಎಂದು ಹೆಚ್‌ಡಿಕೆ ಹೇಳಿದರು.
'ಜನರಿಗೆ ಸೌಲಭ್ಯ ತಲುಪಿರುವ ಬಗ್ಗೆ ಉತ್ತರ ಕೊಡಿ'
ಕಳೆದ ಒಂದೂವರೆ ವರ್ಷದಲ್ಲಿ 2 ಬಾರಿ ಲಾಕ್‌ಡೌನ್ ಮಾಡಲಾಗಿದೆ. ಸರ್ಕಾರದಲ್ಲಿ ಬಿಎಸ್‌ವೈ ಸಿಎಂ ಆಗಿದ್ದಾಗ ಕೆಲವು ವರ್ಗದ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಘೋಷಣೆಗಳನ್ನು ಮಾಡಿದ್ದಾರೆ. ಇದು ಅಭಿನಂದಾರ್ಹ. ಆದರೆ ಜನರಿಗೆ ಈ ಸೌಲಭ್ಯ ಎಷ್ಟರ ಮಟ್ಟಿಗೆ ತಲುಪಿದೆ ಎಂಬುದರ ಬಗ್ಗೆ ಸರ್ಕಾರ ಉತ್ತರ ನೀಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.