ಬೆಂಗಳೂರು : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳು ಸೌಂದರ್ಯ ಬೆಂಗಳೂರಿನ ತಮ್ಮ ನಿವಾಸದಲ್ಲಿಂದು ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈಗಾಗಲೇ ಸೌಂದರ್ಯ ಅವರ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಮಗು ಆದ ಬಳಿಕ ಅವರು ಡಿಪ್ರೆಷನ್‌ಗೆ ಒಳಗಾಗಿದ್ದರು ಎನ್ನಲಾಗಿದೆ. ಸೌಂದರ್ಯ ಮತ್ತು ನೀರಜ್ ದಂಪತಿಗೆ ಒಂದು ಗಂಡು ಮಗುವಿದೆ. ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡ ವೇಳೆ ಮಗು ಮನೆಯಲ್ಲಿತ್ತು.
ಈವರೆಗಿನ ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ ಪತಿ-ಪತ್ನಿ ನಡುವೆ ಯಾವುದೇ ಕಲಹ ಇರಲಿಲ್ವಂತೆ. ಈ ಬಗ್ಗೆ ಸ್ಥಳೀಯರು ಹಾಗೂ ಕೆಲಸಗಾರರನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಈ ವಿಚಾರ ಗೊತ್ತಾಗಿದೆ.
ಪತಿ ಡಾ.ನೀರಜ್ ನಿವಾಸಕ್ಕೆ ಸೌಂದರ್ಯ ಪಾರ್ಥಿವ ಶರೀರ ರವಾನೆ
ಅಬ್ಬಿಗೆರೆಯಲ್ಲಿರುವ ಡಾ.ನೀರಜ್ ನಿವಾಸಕ್ಕೆ ಸೌಂದರ್ಯ ಪಾರ್ಥಿವ ಶರೀರವನ್ನು ರವಾನಿಸಲಾಗಿದೆ. ಅಂತ್ಯ ಸಂಸ್ಕಾರಕ್ಕೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.
ಶಿವಗಂಗೆಯಿಂದ ಸ್ವಾಮೀಜಿಯವರು ಬರುತ್ತಿದ್ದು, ಅವರ ನೇತೃತ್ವದಲ್ಲಿ ಅಂತಿಮ ವಿಧಿ-ವಿಧಾನಗಳು ನಡೆಯಲಿವೆ ಎಂದು ಪುರೋಹಿತ ಚೇತನ್ ಮಾಹಿತಿ ನೀಡಿದ್ದಾರೆ.
ನಿನ್ನೆಯಷ್ಟೇ ಬಾಣಂತನ ಮುಗಿಸಿ ಬಿಎಸ್‌ವೈ ಮನೆಯಿಂದ ಬಂದಿದ್ದ ಸೌಂದರ್ಯ
ಲೆಗ್ಯಾಸಿ ಮೈಕಾನ್ ಡ್ಯು ಅಪಾರ್ಟ್ಮೆಂಟ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಸೌಂದರ್ಯ ದಂಪತಿ ವಾಸವಾಗಿದ್ದರು. ಡೆಲಿವರಿ ಆದಾಗಿಂದ ತಾತ ಯಡಿಯೂರಪ್ಪನವರ ಮನೆಯಲ್ಲೇ ಇದ್ದ ಸೌಂದರ್ಯ, ಬಾಣಂತನ ಮುಗಿಸಿ ನಿನ್ನೆ ಮಧ್ಯಾಹ್ನ ತಮ್ಮ ಫ್ಲ್ಯಾಟ್‌ಗೆ ಬಂದಿದ್ದರು.
ತಹಶೀಲ್ದಾರ್‌ಗೆ ಮರಣೋತ್ತರ ಪರೀಕ್ಷೆ ವರದಿ
ಪ್ರಕರಣದಲ್ಲಿ ತಹಶೀಲ್ದಾರ್ ತನಿಖಾಧಿಕಾರಿಯಾಗಿದ್ದಾರೆ. ಹೀಗಾಗಿ, ಸೌಂದರ್ಯ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು, ನಾವು ತಹಶೀಲ್ದಾರ್‌ಗೆ ವರದಿಯನ್ನು ನೀಡುತ್ತೇವೆ. ಜೊತೆಗೆ ಎಲ್ಲ ವಸ್ತುಗಳನ್ನು ಅವರಿಗೆ ಒಪ್ಪಿಸುತ್ತೇವೆ ಎಂದು ಬೌರಿಂಗ್ ಆಸ್ಪತ್ರೆಯ ಫಾರೆನ್ಸಿಕ್ ವಿಭಾಗದ ಹೆಚ್‌ಒಡಿ ಡಾ.ಸತೀಶ್ ಹೇಳಿದ್ದಾರೆ.
ನಾಳೆ ಪೊಲೀಸರಿಂದ ಸ್ಥಳ ಮಹಜರು
ಸೌಂದರ್ಯ ಆತ್ಮಹತ್ಯೆ ಘಟನೆ ಬಳಿಕ ನೇಣು ಬಿಗಿದುಕೊಂಡಿದ್ದ ವೇಲ್ ಸಮೇತ ಮೃತದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಮಲ್ಲಿಗೆ ಆಸ್ಪತ್ರೆಯಲ್ಲಿ ವೈದ್ಯರು ಮೃತಪಟ್ಟಿದ್ದಾರೆ ಎಂದ ಕೂಡಲೇ ಹೈಗ್ರೌಂಡ್ಸ್ ಪೊಲೀಸರಿಗೆ ಪತಿ ಡಾ.ನೀರಜ್ ಮಾಹಿತಿ ನೀಡಿದ್ದರು.
ಸುದ್ದಿ ತಿಳಿದು ಸ್ಥಳಕ್ಕೆ ಬಂದಿದ್ದ ಪೊಲೀಸರು ಕುತ್ತಿಗೆಯಲ್ಲಿದ್ದ ವೇಲ್ ವಶಕ್ಕೆ ತೆಗೆದುಕೊಂಡಿದ್ದಾರೆ. ಸದ್ಯ ಕುಟುಂಬಸ್ಥರೆಲ್ಲ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ನಾಳೆ ಕುಟುಂಬಸ್ಥರ ಸಮ್ಮುಖದಲ್ಲಿ ವಸಂತನಗರದ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್‌ನಲ್ಲಿ ಪೊಲೀಸರು ಸ್ಥಳ ಮಹಜರು ಮಾಡಲಿದ್ದಾರೆ.