ಬೆಂಗಳೂರು: ಮುಷ್ಕರನಿರತ ಸಾರಿಗೆ ನೌಕರರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಶಾಕ್ ನೀಡಿದ್ದು, ಕೆಲಸಕ್ಕೆ ಗೈರಾಗಿರುವ ಸಾರಿಗೆ ನೌಕರರಿಗೆ ವೇತನ ಕಡಿತಗೊಳಿಸಿದೆ. ಜೊತೆಗೆ ಅಗತ್ಯ ಸೇವೆ ಮತ್ತು ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ ಆದೇಶದ ಅನ್ವಯ ಶಿಸ್ತು ಕ್ರಮಕ್ಕೆ ಆದೇಶ ಹೊರಡಿಸಿದೆ.
ಬಿಎಂಟಿಸಿ ಸುತ್ತೋಲೆಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಿದ್ದು, ಗೈರಾಗುವ ನೌಕರರಿಗೆ ವೇತನ ಕಡಿತ ಹಾಗೂ ಹೊಸದಾಗಿ ಯಾವುದೇ ರಜೆ ಮಂಜೂರು ಮಾಡಬಾರದು. ಮುಷ್ಕರಕ್ಕೆ ಮುನ್ನ ರಜೆ ತೆಗೆದುಕೊಂಡವರಿಗೆ ಈ ಕ್ರಮ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ. ಬಿಎಂಟಿಸಿ ಜಾಗೃತ ಹಾಗೂ ಭದ್ರತಾ ವಿಭಾಗದಿಂದ ಈ ಆದೇಶ ಹೊರಡಿಸಲಾಗಿದೆ.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು. ಸರ್ಕಾರಿ ಸವಲತ್ತುಗಳನ್ನು ನೀಡಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ. 10ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ವಿಧಾನಸೌಧ ಚಲೋ ಹಾಗೂ ಅರೆಬೆತ್ತಲೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುತ್ತಿವೆ.
ಈ ಹಿನ್ನೆಲೆಯಲ್ಲಿ ಉದ್ದೇಶಿತ ವಿಧಾನಸೌಧ ಚಲೋ ಜನಸಾಮಾನ್ಯರಿಗೆ ಒದಗಿಸಬೇಕಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳುವ ಸಲುವಾಗಿ ಕೆಲವು ಸೂಚನೆಗಳೊಂದಿಗೆ ಆ ದಿವಸ ಕೆಲಸ ಮಾಡದಿದ್ದಾಗ ವೇತನವಿಲ್ಲ ಎಂದು ಸುತ್ತೋಲೆ ಹೊರಡಿಸಲಾಗಿತ್ತು.
ಮುಂದುವರೆದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ) ಮತ್ತು ಇತರ ಸಂಘಟನೆಗಳು ಜೊತೆಗೂಡಿ ನಡೆದ ವಿಧಾನಸೌಧ ಚಲೋ ನಂತರದಲ್ಲಿ ಸಹ ಮುಂಚಿತವಾಗಿ ಯಾವುದೇ ರೀತಿಯ ಮುಷ್ಕರದ ನೋಟಿಸ್ ನೀಡದೆ ಅರ್ನಿಷ್ಟಾವಧಿ ಮುಷ್ಕರ ಹೂಡಿರುವುದು ಕಾನೂನು ಬಾಹಿರವಾಗಿದೆ ಎಂದು ತಿಳಿಸಿದೆ.
ಈ ನಿಟ್ಟಿನಲ್ಲಿ ತುರ್ತು ಸಂದರ್ಭದಲ್ಲಿ ರಜೆ ಬೇಕಿದ್ದರೆ ಅಂತಹವರು ಜಾಗೃತ ಹಾಗೂ ಭದ್ರತಾ ವಿಭಾಗ ನಿರ್ದೇಶಕರ ಅನುಮತಿ ಪಡೆಯಬೇಕು. ಅವರ ಅನುಮತಿ ಇಲ್ಲದೇ ರಜೆ ನೀಡಬಾರದು ಎಂದು ಸೂಚಿಸಲಾಗಿದೆ. ಕರ್ತವ್ಯಕ್ಕೆ ಗೈರಾಗುವ ನೌಕರರಿಗೆ ವೇತನವಿಲ್ಲ. ಕಡಿತ ಮಾಡಲಾಗುತ್ತದೆ. ಇನ್ನು ಈ ಸೂಚನೆಗಳು ವಾರದ ರಜೆ ಮತ್ತು ದೀರ್ಘಾವಧಿ ರಜೆಯಲ್ಲಿರುವ ನೌಕರರಿಗೆ ಅನ್ವಯಿಸುವುದಿಲ್ಲ.