ಬೆಂಗಳೂರು: ಇಎಸ್ಐ ಆಸ್ಪತ್ರೆ ವಿರುದ್ಧ ಗುತ್ತಿಗೆ ನೌಕರರು ಇಂದು ಪ್ರತಿಭಟನೆ ನಡೆಸಿದರು. 27 ವರ್ಷ ವಯಸ್ಸಿನ ಒಳಗಿದ್ರೆ ಮಾತ್ರ ಕೆಲಸಕ್ಕೆ ಬರಬೇಕು. 27 ವಯಸ್ಸು ದಾಟಿದ್ರೆ ಕೆಲಸಕ್ಕೆ ಬರಬೇಡಿ ಎಂದು ಇಎಸ್ಐ ಆಸ್ಪತ್ರೆಯ ಆಡಳಿತ ಮಂಡಳಿ ಆದೇಶಿಸಿದೆ. ಇದನ್ನು ವಿರೋಧಿಸಿ ರಾಜಾಜಿನಗರದ ಇಎಸ್ಐ ಆಸ್ಪತ್ರೆ ಆವರಣದಲ್ಲಿ ಪ್ರತಿಭಟಿಸಿದರು.
ಕೋವಿಡ್ ಸಂಕಷ್ಟದಲ್ಲಿ ಕೆಲಸ ನಿರ್ವಹಿಸಿದ್ದ ಗುತ್ತಿಗೆ ನೌಕರರನ್ನು ವಜಾಗೊಳಿಸಲು ಆಸ್ಪತ್ರೆ ನಿರ್ಧರಿಸಿದೆ. ಒಟ್ಟು 103 ಗುತ್ತಿಗೆ ನೌಕರರನ್ನು ತೆಗೆದು ಹಾಕಲು ಆಡಳಿತ ಮಂಡಳಿ ಸಂಚು ಮಾಡಿದ್ದು, ಹೊಸ ಕಂಪನಿಗೆ ಕಾಂಟ್ರ್ಯಾಕ್ಟ್ ನೀಡಿ ಗುತ್ತಿಗೆ ಕಾರ್ಮಿಕರ ನೇಮಕಕ್ಕೆ ಯತ್ನಿಸುತ್ತಿದ್ದಾರೆ ಎಂದು ನೌಕರರು ಆರೋಪಿಸಿದರು.
2016 ರಿಂದ ಉದ್ಯೋಗ್ ಏಜೆನ್ಸಿ ಮೂಲಕ ದಾದಿಯರಾಗಿ ಗುತ್ತಿಗೆ ನೌಕರಿರನ್ನು ಇಎಸ್ಐ ಆಸ್ಪತ್ರೆ ನೇಮಿಸಿಕೊಂಡಿತ್ತು. ಈಗ ಏಕಾಏಕಿ ವಯೋಮಿತಿಯನ್ನು ಮುಂದೆ ತಂದು ಕೆಲಸದಿಂದ ತೆಗೆದು ಹಾಕಲು ಯತ್ನಿಸುತ್ತಿದ್ದಾರೆ. ಸರ್ಕಾರಿ ನೌಕರರಿಗೆ 62 ವರ್ಷ ವಯೋಮಿತಿ ಇದೆ. ಗುತ್ತಿಗೆ ನೌಕರರಿಗೆ ಮಾತ್ರ 18 ರಿಂದ 27 ವರ್ಷದ ಮಿತಿ ಏಕೆ? ಎಂದು ಗುತ್ತಿಗೆ ನೌಕರರು ಪ್ರಶ್ನಿಸಿದರು.
27 ವರ್ಷ ದಾಟಿದವರನ್ನು ತೆಗೆದುಕೊಳ್ಳೋದಿಲ್ಲ, ಅಲ್ಲದೆ 27 ವಯಸ್ಸಿನ ಒಳಗಿರುವವರನ್ನು ಹೊಸ ಕಾಂಟ್ರ್ಯಾಕ್ಟ್ ಕಂಪನಿಯಡಿ ನೇಮಕ ಮಾಡಿಕೊಳ್ಳಿ ಎಂದು ಸಲಹೆ ಕೂಡಾ ನೀಡಿದ್ದಾರೆ. ಈ ತಿಂಗಳ ಅಂತ್ಯದ ಬಳಿಕ ಕೆಲಸಕ್ಕೆ ಬರಬೇಡಿ ಎಂದಿದ್ದಾರೆ. ಮನೆ ಮಠ ಬಿಟ್ಟು ಕೋವಿಡ್ ಕಾಲದಲ್ಲಿ ಕೆಲಸ ನಿರ್ವಹಿಸಿದ ಕಾರ್ಮಿಕರನ್ನು ಇದೀಗ ಹೊರದಬ್ಬಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: ವಿವಾಹೇತರ ಸಂಬಂಧ: ಚಿಕ್ಕಬಳ್ಳಾಪುರದಲ್ಲಿ ಮಹಿಳೆ ಕೊಲೆ ಆರೋಪ, ಪೊಲೀಸ್ ಕಾನ್ಸ್ಟೇಬಲ್ ಎಸ್ಕೇಪ್