ಬೆಂಗಳೂರು: ಗ್ರಾಮೀಣ ಭಾಗದ ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ 47 ತಾಲೂಕುಗಳಲ್ಲಿ ಕಳೆದ ಶನಿವಾರ ಆಯೋಜಿಸಿದ್ದ ವಿದ್ಯುತ್ ಅದಾಲತ್‌ನಲ್ಲಿ 3,671 ಗ್ರಾಹಕರು ಭಾಗವಹಿಸಿ 1,142 ಮನವಿಗಳನ್ನು ಸಲ್ಲಿಸಿದ್ದಾರೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಹೇಳಿದೆ.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಂದ ಹಿಡಿದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರವರೆಗೆ ಭಾಗವಹಿಸಿದ್ದ ವಿದ್ಯುತ್ ಅದಾಲತ್‌ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ರಾಹಕರಿಂದ ಸ್ವೀಕೃತವಾದ ಮನವಿಗಳ ಪೈಕಿ 321 ಮನವಿಗಳಿಗೆ ಬೆಸ್ಕಾಂ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ಒದಗಿಸಿದ್ದಾರೆ. ಇನ್ನುಳಿದ 821 ಮನವಿಗಳನ್ನು ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ರವಾನಿಸಲಾಗಿದೆ.
ಗ್ರಾಮೀಣ ಭಾಗದ ವಿದ್ಯುತ್ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಪ್ರತಿ ತಿಂಗಳ ಮೂರನೇ ಶನಿವಾರದಂದು ಎಲ್ಲ ಎಸ್ಕಾಂಗಳಲ್ಲಿ ವಿದ್ಯುತ್ ಅದಾಲತ್ ಆಯೋಜಿಸಬೇಕೆಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಮೊದಲ ವಿದ್ಯುತ್ ಅದಾಲತ್ ಅನ್ನು ಶನಿವಾರ ಆಯೋಜಿಸಿತ್ತು. ತುಮಕೂರು ಜಿಲ್ಲೆಯ ಹತ್ತು ತಾಲೂಕುಗಳ 654 ಗ್ರಾಹಕರು ಅದಾಲತ್‌ನಲ್ಲಿ ಭಾಗವಹಿಸಿ 209 ಮನವಿಗಳನ್ನು ಸಲ್ಲಿಸಿದರು. ಸುಮಾರು 57 ಮನವಿಗಳಿಗೆ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ಒದಗಿಸಿದ್ದಾರೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಇದನ್ನೂ ಓದಿ: ಮಹಾರಾಷ್ಟ್ರ: ಒಂದೇ ಕುಟುಂಬದ 9 ಜನರ ನಿಗೂಢ ಸಾವು, ಆತ್ಮಹತ್ಯೆ ಶಂಕೆ