ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನೂತನ ಅಧ್ಯಕ್ಷರಾಗಿ ವಕೀಲ ಎಲ್.ಶ್ರೀನಿವಾಸ ಬಾಬು ಹಾಗೂ ಉಪಾಧ್ಯಕ್ಷರಾಗಿ ಚಿಕ್ಕೋಡಿಯ ವಕೀಲರಾದ ಕಲ್ಮೇಶ್ವರ್ ಕಿವಡ ಪರಿಷತ್ತಿನ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.
ಓದಿ: ಸಿಎಂ ಸಂಪುಟ ವಿಸ್ತರಣೆ-ಕೊರೊನಾ ಸಮಸ್ಯೆ ಕುರಿತು ಚರ್ಚೆ ನಡೆಸಿದ್ದಾರೆ: ಡಿಸಿಎಂ ಕಾರಜೋಳ
ನಂತರ ಮಾತನಾಡಿದ ನೂತನ ಅಧ್ಯಕ್ಷ ಎಲ್.ಶ್ರೀನಿವಾಸ ಬಾಬು, ಪರಿಸರ ಉಳಿಸಿ-ಪರಿಸರ ಬೆಳೆಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಗಿಡ ನೆಡುವ ಮುಖೇನ ಪರಿಸರವನ್ನು ಉಳಿಸಿ ಬೆಳೆಸಬೇಕೆಂದು ಹೇಳಿದರು.
ಗ್ರಾಮೀಣ ಪ್ರದೇಶದಿಂದ ಬಂದು ನೂತನವಾಗಿ ವಕೀಲ ವೃತ್ತಿ ನಡೆಸುವವರಿಗೆ ಆರ್ಥಿಕ ಸಹಾಯವನ್ನು ಒದಗಿಸುವುದು. ವಕೀಲರಿಗೆ ಮೂಲಭೂತ ಸೌಕರ್ಯವಾದ ಗ್ರಂಥಾಲಯ, ನೂತನ ತಂತ್ರಜ್ಞಾನ ಹಾಗೂ ಕಂಪ್ಯೂಟರ್ಗಳನ್ನು ಒದಗಿಸುವುದಕ್ಕೆ ಹೆಚ್ಚಿನ ಆಸಕ್ತಿ ವಹಿಸುವುದಾಗಿ ಹೇಳಿದರು.
ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ವಕೀಲರಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ಆರ್ಥಿಕ ಸಹಾಯವನ್ನು ಒದಗಿಸುವ ಇಂಗಿತ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಭಾರತೀಯ ವಕೀಲರ ಪರಿಷತ್ತಿನ ಸದ್ಯಸರು ಹಾಗೂ ಕೋ-ಚೇರ್ಮನ್ ಆದ ವೈ.ಆರ್.ಸದಾಶಿವರೆಡ್ಡಿ ಮತ್ತು ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ಶುಭಾಶಯ ಕೋರಿದರು.
ನಿರ್ಗಮಿತ ಅಧ್ಯಕ್ಷರಾದ ಜೆ.ಎಂ.ಅನಿಲ್ ಕುಮಾರ್ ಮತ್ತು ಉಪಾಧ್ಯಕ್ಷರಾದ ಎನ್.ಶಿವಕುಮಾರ್, ನೂತನ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಅಧಿಕಾರವನ್ನು ಹಸ್ತಾಂತರಿಸಿ ಮಾತನಾಡಿದರು. ರಾಜ್ಯ ವಕೀಲರ ಪರಿಷತ್ತಿನ ಧ್ಯೇಯಗಳನ್ನು ಹಾಗೂ ಗ್ರಾಮೀಣ ಭಾಗದಲ್ಲಿ ವಕೀಲ ವೃತ್ತಿ ನಡೆಸುವ ವಕೀಲರಿಗೆ ಕಾರ್ಯಾಗಾರ ಹಾಗೂ ವೃತ್ತಿಪರತೆಯನ್ನು ಹೆಚ್ಚಿಸುವಲ್ಲಿ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.