ಬೆಂಗಳೂರು : ಯಲಹಂಕ ತಾಲೂಕಿನ ರಾಜಾನುಕುಂಟೆ ಗ್ರಾಮ ಪಂಚಾಯಿತಿಯಲ್ಲಿ ಡಿಜಿಟಲ್ ಲೈಬ್ರರಿ ಮತ್ತು ಸ್ವರ್ಧಾತ್ಮಕ ಅಧ್ಯಯ ನ ಕೇಂದ್ರ ಹಾಗೂ ಮಕ್ಕಳ ಗ್ರಾಮ ಸಭೆಯಲ್ಲಿ ಪಾಲ್ಗೊಂಡಿದ್ದ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪಕ್ಕೆಲುಬು ಪದ ತಪ್ಪು ಉಚ್ಛಾರಣೆ ಮಾಡಿದ ಬಾಲಕನ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿರುವ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಪಕ್ಕೆಲುಬು ವೈರಲ್ ವಿಡಿಯೋಕ್ಕೆ ಸಂಬಂಧಪಟ್ಟಂತೆ ಬಾಲಕನ ವಿಡಿಯೋ ಮಾಡಿರುವ ಶಿಕ್ಷಕನ ವಿರುದ್ಧ ಕ್ರಮಕ್ಕೆ ಎಲ್ಲಾ ಡಿಡಿಪಿಐಗಳಿಗೆ ಆದೇಶ ನೀಡಲಾಗಿದೆ. ಇದೊಂದು ಅಮಾನವೀಯ ಘಟನೆ, ಎಲ್ಲರಿಗೂ ತಮ್ಮ ಜೀವನದಲ್ಲಿ ಒಂದೊಂದು ರೀತಿಯ ಕೊರತೆ ಇರುತ್ತದೆ. ಹಾಗೆಯೇ ಮಾತನಾಡುವಾಗಲು ತಪ್ಪುಗಳಾಗುತ್ತವೆ. ಪಕ್ಕೆಲುಬು ಪದ ತಪ್ಪು ಉಚ್ಛಾರಣೆ ಮಾಡಿದ ಬಾಲಕನ ವಿಡಿಯೋ ಮಾಡಿ, ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಮಾಡಿದ್ದು ಬಾಲಕನಿಗೆ ಮಾಡಿದ ಅವಮಾನ. ಮುಂದೆ ಇದೇ ವಿಡಿಯೋವನ್ನು ಆ ಮಗು ನೋಡಿದಾಗ ಖಿನ್ನತೆಗೆ ಒಳಗಾಗುತ್ತಾನೆ. ಎಜುಕೇಷನ್ ಕಮಿಷನರ್ ಈಗಾಗಲೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಮೂಲಕ ಎಲ್ಲಾ ಶಾಲೆಗಳಿಗೆ ಎಚ್ಚರಿಕೆ ನೀಡಲಾಗುವುದು. ಈ ರೀತಿ ಮಾಡುವುದನ್ನು ಯಾರೂ ಸಹಿಸುವುದಿಲ್ಲ, ಈ ರೀತಿ ಮಾಡಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದೆಂದರು.
ಕಲಿಕೆಯಲ್ಲಿ ಬಾಲಕನ ತಪ್ಪು ಪದೋಚ್ಚಾರ: ಶಿಕ್ಷಕನ 'ಪಕ್ಕೆಲುಬಿ'ಗೆ ಬಂತು ಸಂಚಕಾರ
ಇದೇ ವೇಳೆ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿ.ಟಿ. ರವಿಯ ಕ್ರಮವನ್ನು ಸಮರ್ಥನೆ ಮಾಡಿಕೊಂಡರು. ಸಿ.ಟಿ ರವಿ ಅವರು ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರು. ಅನೇಕ ಹೋರಾಟ ಮಾಡ್ಕೊಂಡು ಬಂದಿರುವವರು. ಜೊತೆಗೆ ಚಿಕ್ಕಮಗಳೂರಿನ ಹಿನ್ನೆಲೆ ಅವರಿಗೆ ಗೊತ್ತಿರುವುದರಿಂದ ನಿರ್ಧಾರ ತಗೊಂಡು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಾವುದೇ ವಿವಾದವಿಲ್ಲದೆ ಮಾಡುವುದು ಒಳ್ಳೆಯದು. ಸಿ.ಟಿ.ರವಿಯವರ ಅಭಿಪ್ರಾಯ ಜಿಲ್ಲೆಯ ಹಿನ್ನೆಲೆಯಿಂದ ಬಂದಿರುವುದು ಎಂದರು.
ಮಂಗಳೂರಿನಲ್ಲಿ ನಡೆದ ಗಲಭೆ, ಗೋಲಿಬಾರ್ ಪ್ರಕರಣದಲ್ಲಿ ಬಿಜೆಪಿ ಸರ್ಕಾರ ನಾಟಕವಾಡಿದೆ ಎಂದು ಹೆಚ್ಡಿಕೆ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಸುರೇಶ್ ಕುಮಾರ್, ಪೊಲೀಸ್ ಒಂದು ಇಲಾಖೆ, ಪೊಲೀಸರು ಆ ರೀತಿಯ ಕೃತ್ಯ ಮಾಡುತ್ತಾರೆ ಅಂದ್ರೆ ಯಾರು ನಂಬುವುದಿಲ್ಲ. ಇವರು ಮಾಡಿರುವುದು ವಿವೇಚನೆಯಿಂದ ಕೂಡಿದ ನಡೆ ಅಲ್ಲ. ಇಲಾಖೆಯೊಂದಕ್ಕೆ ಮಸಿ ಬಳಿಯುವಂತಹ ಕೆಲಸ ಮಾಡಬಾರದು ಎಂದರು.