ಬೆಂಗಳೂರು: ಪವರ್ ಬ್ಯಾಂಕ್ ಹಾಗೂ ಸನ್ ಫ್ಯಾಕ್ಟರಿ ಹೆಸರಿನ ಆನ್ಲೈನ್ ಮೊಬೈಲ್ ಅಪ್ಲಿಕೇಷನ್ಗಳ ಮೂಲಕ ದೇಶದೆಲ್ಲೆಡೆ ಅನೇಕ ಜನರಿಂದ ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದ ಆರೋಪದಡಿ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಕೇರಳ ಮೂಲದ ಅನಸ್ ಅಹಮ್ಮದ್ ಬಂಧಿತ ಆರೋಪಿಯಾಗಿದ್ದಾನೆ. ವಂಚನೆ ಪ್ರಕರಣದಲ್ಲಿ ಈತನನ್ನು ಕಳೆದ ವರ್ಷ ನವೆಂಬರ್ನಲ್ಲೇ ಸಿಐಡಿ ಪೊಲೀಸರು ಬಂಧಿಸಿದ್ದರು. ಈತನ ಪತ್ನಿಯಾಗಿರುವ ಚೀನಾ ಪ್ರಜೆ ಹೂ ಕ್ಸಿಯೊಲಿನ್ ಎಂಬಾಕೆಯನ್ನು ವಶಕ್ಕೆ ಪಡೆದುಕೊಂಡಿದ್ದರು.
ಇದೀಗ ಆರೋಪಿಯನ್ನು ಇಡಿ ಬಂಧಿಸಿದ್ದು, ವಿಚಾರಣೆ ನಡೆಸಿದಾಗ ಈತ 84 ಕೋಟಿ ರೂಪಾಯಿ ಹಣವನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ. ದಿನ ಹಾಗೂ ವಾರದ ಲೆಕ್ಕದಲ್ಲಿ ಹಣ ಹೂಡಿಕೆ ಮಾಡಿದರೆ ಬಡ್ಡಿ ಸಮೇತ ದುಪ್ಪಟ್ಟು ಹಣ ನೀಡುವುದಾಗಿ ಹೇಳಿ ಸಾವಿರಾರು ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡಿದ್ದ. ಈ ಹಣವನ್ನು ಹವಾಲಾ ದಂಧೆಗೆ ಬಳಸಿಕೊಳ್ಳುತ್ತಿದ್ದ ಎನ್ನಲಾಗ್ತಿದೆ.
ಇದನ್ನೂ ಓದಿ: ಕೊಟ್ಟ ಸಾಲ ವಾಪಸ್ ಕೇಳಿದ ಮಹಿಳೆ ಮೇಲೆ ಶೂಟೌಟ್, ಕೊಲೆ: ಸಂಕೇಶ್ವರ ಪುರಸಭೆ ಬಿಜೆಪಿ ಸದಸ್ಯ ಅರೆಸ್ಟ್
ಚೀನಾದ ಹವಾಲಾ ದಂಧೆಕೋರರ ಸಂಪರ್ಕದಲ್ಲಿದ್ದ ಈತ ಅಕ್ರಮ ಹಣ ವರ್ಗಾವಣೆಗಾಗಿ ಬುಲ್‌ಫಿನ್ಚ್ ಸಾಫ್ಟ್‌ವೇರ್, ಎಚ್ ಆ್ಯಂಡ್ ಎಸ್ ವೆಂಚರ್ಸ್, ಕ್ಲಿಪ್ಪೊರ್ಡ್ ವೆಂಚರ್ಸ್ ಹಾಗೂ ಬಯೋಸಾಫ್ಟ್ ವೆಂಚರ್ಸ್ ಹೆಸರಿನ ಕಂಪನಿಗಳನ್ನೂ ತೆರೆದಿದ್ದ. ಈತನಿಗೆ ಪತ್ನಿ ಹೂ ಕ್ಸಿಯೊಲಿನ್ ಸಾಥ್ ನೀಡಿದ್ದಳು.
ರೇಜರ್ ಪೇ ಸಾಫ್ಟ್ ವೇರ್ ಕಂಪನಿ ದೂರು ನೀಡಿದ ಮೇರೆಗೆ ಚೀನಾ ಹಾಗೂ ಟಿಬೇಟಿಯನ್ ಪ್ರಜೆ ಸೇರಿದಂತೆ 11 ಮಂದಿ ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ದೇಶದ ಹಲವೆಡೆ ಈತನ ವಿರುದ್ಧ ನೂರಾರು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣವು ವಿದೇಶಿ ಪ್ರಜೆಗಳು ಮತ್ತು ಕಂಪನಿಗಳನ್ನು ಒಳಗೊಂಡಿರುವುದರಿಂದ, ರಾಷ್ಟ್ರೀಯ ಏಜೆನ್ಸಿಗಳಾದ ಕೇಂದ್ರೀಯ ತನಿಖಾ ದಳ (ಸಿಬಿಐ), ಇಂಟೆಲಿಜೆನ್ಸ್ ಬ್ಯೂರೋ (ಐಬಿ), ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿವೆ.
ಜಾಹೀರಾತು:- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ