ಬೆಂಗಳೂರು: ನಗರದಲ್ಲಿ ರಾತ್ರಿ ವೇಳೆ ಮದ್ಯ ಸೇವಿಸಿ ಅಪಘಾತ ಪ್ರಕರಣ ಹೆಚ್ಚಾದ ಹಿನ್ನೆಲೆ ತಹಬದಿಗೆ ತರಲು ಸಂಚಾರಿ ಪೊಲೀಸರು ಒಂದೂವರೆ ವರ್ಷದ ಬಳಿಕ ಡ್ರಂಕ್ ಅಂಡ್ ಡ್ರೈವ್ ತಪಾಸಣೆಗೆ ಇಳಿದಿದ್ದಾರೆ.
ರಾಜಧಾನಿಯಲ್ಲಿ ಸರಣಿ ಸಂಖ್ಯೆಯಲ್ಲಿ ಅಪಘಾತಗಳು ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾವು - ನೋವು ಸಂಭವಿಸುತ್ತಿವೆ. ಮೇಲ್ನೊಟಕ್ಕೆ ಕುಡಿದು ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿರುವುದು ಜತೆಗೆ ಅಜಾಗರೂಕತೆಯಿಂದ ವೇಗವಾಗಿ ವಾಹನ ಚಲಾಯಿಸುತ್ತಿರುವುದು ಕಂಡು ಬಂದಿದೆ.
ಕೊರೊನಾ ಬಿಕ್ಕಟ್ಟಿನ ಅವಧಿಯಲ್ಲಿ ಚಾಲಕರ ತಪಾಸಣೆ ತಾತ್ಕಾಲಿಕವಾಗಿ ತಡೆದಿದ್ದ, ಸಮಯ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕಳೆದ ರಾತ್ರಿ (ಶುಕ್ರವಾರ) ಟ್ರಾಫಿಕ್ ಪೊಲೀಸರು ಫೀಲ್ಡ್ ಗಿಳಿದು ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರ ಮೇಲೆ ಕಾನೂನು ಕ್ರಮ ಕೈಗೊಂಡಿದ್ದಾರೆ.
ನಿನ್ನೆ (ಶುಕ್ರವಾರ) ರಾತ್ರಿ 11 ರಿಂದ 2 ಗಂಟೆಯವರೆಗೆ ನಗರದ ಪ್ರಮುಖ ಸರ್ಕಲ್, ಚೆಕ್‌ಪೋಸ್ಟ್ ಸೇರಿದಂತೆ ನಾಕಾಬಂದಿ ಹಾಕಿ ವಾಹನ ತಪಾಸಣೆ ನಡೆಸಿದರು. ಈ ವೇಳೆ, 46 ಮಂದಿ ಚಾಲಕರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ವಾಹನಗಳನ್ನ ಸೀಜ್ ಮಾಡಿದ್ದಾರೆ.
ವಾಹನ ಚಾಲಕರ ಚಾಲನಾ ಪರವಾನಗಿ ಅಮಾನತು ಮಾಡಲು ಆರ್ಟಿಒಗೆ ಶಿಫಾರಸು ಮಾಡಿದ್ದಾರೆ. ವಿಶೇಷ ಕಾರ್ಯಾಚರಣೆ ವೇಳೆ 1408 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿದ್ದಾರೆ. ಅಪಘಾತ ತಪ್ಪಿಸಲು ಹಾಗೂ ವಾಹನ ಸವಾರರ ದೃಷ್ಟಿಯಿಂದ ಇನ್ನು ಮುಂದೆ ನಿರಂತರವಾಗಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಲಾಗುವುದು. ವಾಹನ ಸವಾರರು ಮದ್ಯ ಸೇವಿಸಿ ವಾಹನ ಚಾಲನೆ ಮಾಡದಂತೆ ಟ್ರಾಫಿಕ್ ಕಮಿಷನರ್ ಡಾ.ಬಿ.ಅರ್.ರವಿಕಾಂತೇಗೌಡ ಮನವಿ ಮಾಡಿದ್ದಾರೆ.