ಬೆಂಗಳೂರು: ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರ, ವಾಹನ ಚಾಲಕರ ಮತ್ತು ಗ್ರೂಪ್ ಡಿ ನೌಕರರ ಸಂಘದ ವತಿಯಿಂದ ನಗರದಲ್ಲಿ ಶಿಕ್ಷಣ ಇಲಾಖೆ ಜಾರಿಗೆ ತಂದಿರುವ ಆನ್‌ಲೈನ್ ಸೇವೆಗಳ ಕುರಿತ ವಿಚಾರ ಸಂಕಿರಣ ಉದ್ಘಾಟಿಸಲಾಯ್ತು.
ಶಿಕ್ಷಕರ ಸದನದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್, ಮುಂದಿನ ಅಧಿವೇಶನದ ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನೇಮಕಾತಿಯಿಂದ ಹಿಡಿದು ಕಚೇರಿ, ಮೂಲಭೂತ ಸೌಕರ್ಯ, ಬಾಕಿ ವೇತನ ಸೇರಿದಂತೆ ವಿವಿಧ 18 ಬೇಡಿಕೆಗಳಿಗೆ ಸಂಬಂಧಿಸಿದಂತೆ ಕ್ರಮ ವಹಿಸಲಾಗುವುದು. ಚಳಿಗಾಲದ ಅಧಿವೇಶನ ಮುಗಿದ ಕೂಡಲೇ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಅನಂತರ ಎಲ್ಲ ಸಮಸ್ಯೆಗಳಿಗೂ ಪರಿಹಾರ ಹುಡುಕುತ್ತೇವೆ ಎಂದರು.
ರಾಜ್ಯದಲ್ಲಿ ಆನ್‌ಲೈನ್ ವ್ಯವಸ್ಥೆ ಅತ್ಯಂತ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಜನರಲ್ಲಿ ಸರ್ಕಾರಿ ಇಲಾಖೆಗಳ ಹಾಗೂ ರಾಜಕಾರಣಿಗಳ ಮೇಲೆ ನಂಬಿಕೆ ಇಲ್ಲದಂತಾಗಿದೆ. ಆದರೂ, ನಾವೇ ಇದನ್ನು ಜಾರಿ ಮಾಡಬೇಕಾಗಿದೆ. ಜನರಲ್ಲಿ ಅಪನಂಬಿಕೆ ತೊಲಗಿಸಿ, ನಂಬಿಕೆ ತರುವುದೇ ಆನ್‌ಲೈನ್ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಎಸ್ಎಸ್ಎಲ್ಸಿ ಬೋರ್ಡ್ ನಿರ್ದೇಶಕಿ ಸುಮಂಗಲಾ ಮಾತನಾಡಿ, ಆಡಳಿತದಲ್ಲಿ ತಂತ್ರಜ್ಞಾನ ಬಳಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯಲ್ಲಿ ಅನೇಕ ಯೋಜನೆಗಳು ಆನ್‌ಲೈನ್ ಮೂಲಕ ನಿರ್ವಹಿಸಲಾಗುತ್ತಿದೆ. ಶಿಕ್ಷಕರು ಹಲವು ಸೇವೆಗಳನ್ನು ಪಡೆಯಲು ಬಿಇಒ ಕಚೇರಿಯಿಂದ ರಾಜ್ಯಮಟ್ಟದ ಕಚೇರಿವರೆಗೂ ಅಲೆಯಬೇಕಿತ್ತು. ಇದೀಗ ಆನ್‌ಲೈನ್ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರಿಗೂ ಸಹಕಾರಿಯಾಗಿದೆ ಎಂದರು.