ಬೆಂಗಳೂರು : ನಗರದ ಕೋವಿಡ್ ಪಾಸಿಟಿವ್ ಇರುವ ಗರ್ಭಿಣಿಯರಿಗೆ ಹೆರಿಗೆ ನಡೆಸಲು ಘೋಷಾ ಆಸ್ಪತ್ರೆ ನಿಗದಿ ಮಾಡಲಾಗಿದೆ. ಕೊರೊನಾ ಎರಡನೇ ಅಲೆಯಲ್ಲಿಯೇ 458 ಗರ್ಭಿಣಿಯರಿಗೆ ಸೋಂಕು ದೃಢಪಟ್ಟಿದೆ.
ಓದಿ: ಕರುನಾಡಿಗೆ ಕೊರೊನಾ ಕಂಟಕ.. ಶೇ 39.7ಕ್ಕೆ ಏರಿಕೆ ಕಂಡ ಪಾಸಿಟಿವ್ ರೇಟ್!
ಮಾರ್ಚ್ 27 ರಿಂದ ಕೋವಿಡ್ ಸೋಂಕಿತ ಗರ್ಭಿಣಿಯರ ಚಿಕಿತ್ಸೆ ಹಾಗೂ ಪ್ರಸವ ನಡೆಸಲಾಗುತ್ತಿದೆ. ನಾರ್ಮಲ್ ಡೆಲಿವರಿ 110 ನಡೆದಿದೆ. ಇದರಲ್ಲಿ 128 ಸಿಜೇರಿಯನ್ ಆಗಿದ್ದು, ಅಬಾರ್ಷನ್ 5 ಹಾಗೂ 26 ಪ್ರಸವ ಪೂರ್ವ ಹೆರಿಗೆ ಆಗಿದೆ.
ಈ ಪೈಕಿ ಆರು ಹಸುಗೂಸು ಮಕ್ಕಳಿಗೂ ಕೋವಿಡ್ ಸೋಂಕು ದೃಢಪಟ್ಟಿದ್ದು, ನಾಲ್ಕು ನವಜಾತ ಶಿಶುಗಳು ಹುಟ್ಟಿದ ಎರಡು ಗಂಟೆಯಲ್ಲಿ ಮೃತಪಟ್ಟಿವೆ ಎಂದು ಘೋಷಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ತುಳಸಿದೇವಿ ತಿಳಿಸಿದ್ದಾರೆ.
ಕೋವಿಡ್ ಎರಡನೇ ಅಲೆಯಲ್ಲಿ ಹೆಚ್ಚು ಗರ್ಭಿಣಿಯರಿಗೂ ಸೋಂಕು ತಗುಲುತ್ತಿದೆ. ಕೋವಿಡ್ ಪೀಡಿತ ಗರ್ಭಿಣಿಯರಲ್ಲಿ ಶ್ವಾಸಕೋಶ ಸೋಂಕು ಅಥವಾ ನ್ಯುಮೋನಿಯಾ ತೀವ್ರವಾಗಿದ್ದಾಗ ತಾಯಿ ಮತ್ತು ಮಗು ಇಬ್ಬರನ್ನು ಉಳಿಸಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ ಎಂದು ಡಾ.ತುಳಸಿದೇವಿ ತಿಳಿಸಿದ್ದಾರೆ.
ಕೋವಿಡ್ ಚಿಕಿತ್ಸೆ ಸಂದರ್ಭದಲ್ಲಿ ತಾಯಿಯನ್ನು ರಕ್ಷಿಸಿಕೊಳ್ಳಲು ರೆಮ್ಡಿಸಿವಿರ್ ಅಥವಾ ಸ್ಟಿರಾಯ್ಡ್ ಚಿಕಿತ್ಸೆ ನೀಡುವುದು ಅನಿವಾರ್ಯವಾಗುತ್ತದೆ. ತಾಯಿಯ ಹೊಟ್ಟೆಯಲ್ಲಿ ಮಗು ಇರುವಾಗಲೇ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡುವುದು ಕಷ್ಟ.
ಆಗ ಅವಧಿಪೂರ್ವ ಪ್ರಸವ ಮಾಡಬೇಕಾಗುತ್ತದೆ. ಹೀಗಾಗಿ, ಗರ್ಭಿಣಿಯರು ಸೋಂಕು ಬಾರದಂತೆ ಗರಿಷ್ಟ ಎಚ್ಚರಿಕೆ ವಹಿಸಬೇಕೆಂದು ಡಾ.ತುಳಸಿದೇವಿ ಹೇಳಿದ್ದಾರೆ.
ಅಲ್ಲದೆ ನಗರದ ಘೋಷಾ ಆಸ್ಪತ್ರೆಗೆ ಇತರ ಜಿಲ್ಲೆಗಳಿಂದಲೂ, ಖಾಸಗಿ ಆಸ್ಪತ್ರೆಗಳಿಂದಲೂ ಕೋವಿಡ್ ಪೀಡಿತ ಗರ್ಭಿಣಿಯರು ಆರೋಗ್ಯ ಪರಿಸ್ಥಿತಿ ಹದಗೆಟ್ಟ ಸ್ಥಿತಿಯ ನಂತರವೇ ಬರುತ್ತಿರುವುದರಿಂದ ಆರೋಗ್ಯ ನಿರ್ವಹಣೆ ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.