ಬೆಂಗಳೂರು:ರಾಜ್ಯದ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಹೀಗಾಗಿ ಎರಡನೇ ಶನಿವಾರವಾದ ಇಂದೂ ಕೂಡ ಕಡ್ಡಾಯವಾಗಿ ಪಾಲಿಕೆ ಅಧಿಕಾರಿಗಳು, ನೌಕರರು ಕಚೇರಿಯಲ್ಲಿ ಹಾಜರಿರಬೇಕೆಂದು ಆಯುಕ್ತರಾದ ಬಿ ಹೆಚ್ ಅನಿಲ್‌ಕುಮಾರ್ ಸುತ್ತೋಲೆ ಹೊರಡಿಸಿದ್ದರು. ಆದರೆ, ಆಯುಕ್ತರ ಆದೇಶಕ್ಕೆ ಕಿಂಚಿತ್ತೂ ಬೆಲೆ ನೀಡದ ಬಹುತೇಕ ಬಿಬಿಎಂಪಿ ಅಧಿಕಾರಿ, ನೌಕರರು ಆಫೀಸ್ಗೆ ಚಕ್ಕರ್ ಹೊಡೆದಿದ್ದಾರೆ.
ಹೀಗಾಗಿ ಇಂದು ಬಿಬಿಎಂಪಿ ಕೇಂದ್ರ ಕಚೇರಿ ಖಾಲಿ ಖಾಲಿಯಾಗಿ ಬಣಗುಡುತ್ತಿತ್ತು. ಇನ್ನು, ವಲಯ ಕಚೇರಿ, ವಾರ್ಡ್ ಕಚೇರಿಗಳ ಕಥೆ ಕೇಳೋದೆ ಬೇಡ. ಎಲ್ಲಾ ಕಚೇರಿಯ ಬಾಗಿಲು ತೆಗೆದಿದ್ದರೂ ಕುರ್ಚಿ, ಟೇಬಲ್ಗಳು ಮಾತ್ರ ನೌಕರರಿಲ್ಲದೆ ಖಾಲಿ ಹೊಡೆಯುತ್ತಿತ್ತು. ವಿಧಾನಮಂಡಲ ಅಧಿವೇಶನದ ಹೊತ್ತಿನಲ್ಲಾದರೂ,ಸಂಬಂಧಪಟ್ಟ ಯೋಜನೆಗಳ ಮಾಹಿತಿ, ದಾಖಲೆ,ಲೆಕ್ಕಗಳನ್ನು ನೀಡಬೇಕಾದ ಪಾಲಿಕೆ ಅಧಿಕಾರಿಗಳೇ ಕರ್ತವ್ಯಕ್ಕೆ ಗೈರಾಗಿದ್ದಾರೆ. ಶೇ.50ರಷ್ಟೂ ಹಾಜರಾತಿ ಇಲ್ಲದೆ ಕರ್ತವ್ಯಕ್ಕೆ ಗೈರಾಗಿದ್ದಾರೆ. ಈ ಬಗ್ಗೆ ಸಿಬ್ಬಂದಿ ಕೇಳಿದ್ರೆ, ಪಾಲಿಕೆ ಕೇಂದ್ರ ಕಚೇರಿಯಿಂದ ಮಾಹಿತಿ ಬಂದಿದ್ದೇ ತಡವಾಗಿದೆ. ಹೆಚ್ಚಿನವರಿಗೆ ಈ ಬಗ್ಗೆ ಮಾಹಿತಿ ಇಲ್ಲದೆ ರಜೆ ಹಾಕಿದ್ದಾರೆ ಎಂದು ಸಬೂಬು ನೀಡುತ್ತಿದ್ದಾರೆ.
ವರ್ಷಪೂರ್ತಿ ಎರಡನೇ ಶನಿವಾರ ರಜೆ ಇದ್ದರೂ, ಅಗತ್ಯದ ಸಂದರ್ಭದಲ್ಲೂ ಕೆಲಸ ಮಾಡದೆ, ಕಚೇರಿ ಆದೇಶಕ್ಕೇ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಇಂತಹ ಬೇಜವಾಬ್ದಾರಿ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಆಯುಕ್ತರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಕಾದು ನೋಡಬೇಕಿದೆ.