ಬೆಂಗಳೂರು: ಗೊಡ್ಡು ಬೆದರಿಕೆಗೆ ಹೆದರುವ ಮಕ್ಕಳು ನಾವಲ್ಲ. ನಮ್ಮನ್ನು ಜೈಲಿಗೆ ಹಾಕಿದ್ರೂ ಪರವಾಗಿಲ್ಲ. ನಾವು ಮೇಕೆದಾಟು ಪಾದಯಾತ್ರೆ ಮಾಡಿಯೇ ತೀರುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ.
ವಿಧಾನಸೌಧದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೊವೀಡ್ ರೂಲ್ಸ್ಗೆ ನಾವು ಗೌರವ ಕೊಡುತ್ತೇವೆ. ಕೊವೀಡ್ ಇಲ್ಲಿ ( ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ )ಇದೆ. ಎಲ್ಲರೂ ಗುಂಪಾಗಿ ಇದ್ದಾರಲ್ಲ. ಗೃಹ ಸಚಿವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
'ಆರಗ ಜ್ಞಾನೇಂದ್ರ ಇನ್ನೊಂದು ಜನ್ಮ ಹುಟ್ಟಿ ಬರಬೇಕು'
ಯಾವುದು ಇದು ಆಟ. ಜೈಲಿಗೆ ಹೋಗಲು ನಾವು ಸಿದ್ಧವಿದ್ದೇವೆ. ಪಾದಯಾತ್ರೆಗೆ ಎಲ್ಲರೂ ಬರುತ್ತಾರೆ. ಗೃಹ ಸಚಿವರು, ಆರೋಗ್ಯ ಸಚಿವರು ಎಲ್ಲ ಏನು ಮಾತನಾಡಿದ್ದಾರೆ ಗೊತ್ತು. ನಾವು 40 ವರ್ಷದಿಂದ ರಾಜಕಾರಣ ಮಾಡಿಕೊಂಡು ಬರುತ್ತಿದ್ದೇವೆ. ಇದನ್ನು ನಿಲ್ಲಿಸೋಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇನ್ನೊಂದು ಜನ್ಮ ಹುಟ್ಟಿ ಬರಬೇಕು ಎಂದು ವಾಗ್ದಾಳಿ ನಡೆಸಿದರು.
ಗೃಹ ಸಚಿವರಿಗೆ ತಾಕತ್ ಇದ್ದರೆ ಬಂಧಿಸಲಿ
ಗೃಹ ಸಚಿವರ ಮೇಲೆ ಕೆಂಡಾ ಮಂಡಲರಾದ ಡಿಕೆಶಿ, ಅವರು ತಾಕತ್ತು ಏನಿದೆ ಎಂಬುದನ್ನು ತೋರಿಸಲಿ, ಆ ಮೇಲೆ ನಾವು ನಮ್ಮ ತಾಕತ್ತು ತೋರಿಸ್ತೀವಿ. ಇಲ್ಲಿ ಇಷ್ಟೊಂದು ಜನ ಸೇರಿದ್ದಾರಲ್ಲ, ಯಾಕೆ ಇವರ ಮೇಲೆ ಕೇಸ್ ಹಾಕಿಲ್ಲ ಎಂದು ಪ್ರಶ್ನಿಸಿದರು. ಗೃಹ ಸಚಿವರು ಯಾರನ್ನು ಹೆದರಿಸುತ್ತಿದ್ದಾರೆ. ಪಾದಯಾತ್ರೆ ಮಾಡೇ ಮಾಡುತ್ತೇವೆ. ತಾಕತ್ ಇದ್ದರೆ ಬಂಧಿಸಲಿ ಎಂದು ಸರ್ಕಾರಕ್ಕೆ ಡಿಕೆಶಿ ಸವಾಲು ಹಾಕಿದರು.
ಇದನ್ನೂ ಓದಿ: ಕೋವಿಡ್ ಕಠಿಣ ನಿಯಮ ಕಾಂಗ್ರೆಸ್ಗೂ ಅನ್ವಯ : ಗೃಹ ಸಚಿವ ಆರಗ ಜ್ಞಾನೇಂದ್ರ