ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಎಲ್ಲ ಅಂಧ ವಿದ್ಯಾರ್ಥಿಗಳಿಗೆ 15 ದಿನಗಳಲ್ಲಿ ಬ್ರೈಲ್ ಪಠ್ಯಪುಸ್ತಕಗಳನ್ನು ಪೂರೈಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ದಿ ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಪ್ರಸಕ್ತ ಶೈಕ್ಷಣಿಕ ವರ್ಷ ಈಗಾಗಲೇ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳ ಒಳಗೆ ರಾಜ್ಯದ ಎಲ್ಲ ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಪಠ್ಯ ಪುಸ್ತಕಗಳನ್ನು ಪೂರೈಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ. ಜತೆಗೆ, 107 ಪಠ್ಯಪುಸ್ತಕಗಳನ್ನು ಕೆಟಿಬಿಎಸ್ ವೆಬ್‌ಸೈಟ್‌ನಲ್ಲಿ ಇ-ಪಬ್ 3 ಮಾದರಿಯಲ್ಲಿ ಪ್ರಕಟಿಸಲಾಗಿರುವ ಕುರಿತ ವಸ್ತುಸ್ಥಿತಿ ವರದಿಯನ್ನು 2 ವಾರಗಳ ಒಳಗೆ ಕೋರ್ಟ್‌ಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಅಕ್ಟೋಬರ್ 7ಕ್ಕೆ ಮುಂದೂಡಿತು.
ಅರ್ಜಿದಾರರು ಮನವಿ:
ಆರ್‌ಟಿಐ ಕಾಯ್ದೆ-2009, ಅಂಗವಿಕಲರ ಕಾಯ್ದೆ-1995-ರ ಅನುಸಾರ ಅಂಧ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಇತರ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ಬ್ರೈಲ್ ಲಿಪಿಯಲ್ಲಿ ಪೂರೈಸುವುದು ಹಾಗೂ ಅವುಗಳನ್ನು ಡಿಜಿಟಲ್, ಆನ್‌ಲೈನ್ ಮತ್ತು ಇ-ಪಬ್-3 ಸೇರಿ ಇತರ ಆಧುನಿಕ ಸುಧಾರಿತ ಮಾದರಿಯಲ್ಲಿ ನೀಡುವುದು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ.
ಈ ಸಂಬಂಧ 2016ರ ನ.29ರಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಂಗವಿಕಲರ ಸಬಲೀಕರಣ ಇಲಾಖೆ ಎಲ್ಲ ರಾಜ್ಯಗಳಿಗೆ ಲಿಖಿತ ನಿರ್ದೇಶನ ನೀಡಿದೆ. ಆದರೆ, ಈವರೆಗೆ ಕರ್ನಾಟಕದಲ್ಲಿ ಅದನ್ನು ಅನುಷ್ಠಾನಕ್ಕೆ ತರಲಾಗಿಲ್ಲ. ಆದ್ದರಿಂದ, ಈ ನಿಟ್ಟಿನಲ್ಲಿ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.