ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ಎಲ್ಲಾ ವಾರ್ಡ್ ಗಳಲ್ಲಿಯೂ ಕಸ ಸಂಗ್ರಹಿಸುವ ವಾಹನಗಳನ್ನು ಸ್ಥಗಿತಗೊಳಿಸಿ ಗುತ್ತಿಗೆದಾರರು ಧರಣಿ ಆರಂಭಿಸಿದ್ದು, ಸಿಲಿಕಾನ್ ಸಿಟಿ ಮತ್ತಷ್ಟು ದುರ್ನಾತ ಬೀರಲಿದೆ.
ಶುಕ್ರವಾರದಿಂದ ಬಿಬಿಎಂಪಿ ಕಸ ಸಂಗ್ರಹ ಗುತ್ತಿಗೆದಾರರ ಮುಷ್ಕರ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಕಸ ಗುಡಿಸಿ ಗುಡ್ಡೆ ಮಾಡಿ ಪೌರಕಾರ್ಮಿಕರು ಹಾಗೆಯೇ ಬಿಟ್ಟಿದ್ದಾರೆ. ಕಸ ಕೊಂಡೊಯ್ಯುವ ಟಿಪ್ಪರ್, ಲಾರಿಗಳು ಬಾರದ ಕಾರಣ ಅಲ್ಲಲ್ಲಿ ಕಸವನ್ನು ಪೌರಕಾರ್ಮಿಕರು ಬಿಟ್ಟುಹೋಗಿರುವ ದೃಶ್ಯ ನಗರದಲ್ಲಿ ಕಂಡುಬಂತು.
ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗ ಜಮಾಯಿಸಿದ್ದ ಗುತ್ತಿಗೆದಾರರು ಧರಣಿ ನಡೆಸಿ, ಕಳೆದ ಆರು ತಿಂಗಳಿಂದ ಬಾಕಿ ಉಳಿಸಿಕೊಂಡ ನೂರಾರು ಕೋಟಿ ರೂ ಬಿಲ್ ಪಾವತಿ ಮಾಡಬೇಕೆಂದು ಆಗ್ರಹಿಸಿದರು.
ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾಗಿರುವ ತುಳಸಿ ಮದ್ದಿನೇನಿ ವಿನಾಕಾರಣ ಅನುದಾನ ಬಿಡುಗಡೆಗೆ ಕೊಕ್ಕೆ ಹಾಕಿದ್ದಾರೆ. ಮುಖ್ಯ ಆಯುಕ್ತರ ಆದೇಶಕ್ಕೂ ಬೆಲೆ ಕೊಡದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವುದಾಗಿ ಧರಣಿ ನಿರತರು ಆರೋಪಿಸಿದರು.
ಓದಿ: ಏಕ್ ಲವ್ ಯಾ ಸಿನಿಮಾ ನೋಡುತ್ತಾರಾ ಸಿಎಂ ಬಸವರಾಜ್ ಬೊಮ್ಮಾಯಿ?
ಬೆಂಗಳೂರಿನಲ್ಲಿ ಕಸದ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರತಿ ದಿನ ನಾಲ್ಕೂವರೆ ಸಾವಿರಕ್ಕೂ ಅಧಿಕ ಟನ್ ಕಸ ಉತ್ಪತ್ತಿಯಾಗುತ್ತಿದೆ. ಇಡೀ ನಗರದ ಕಸವನ್ನು ವಿಲೇವಾರಿ ಮಾಡುವವರನ್ನು ಪಾಲಿಕೆ ಕಳೆದ 6 ತಿಂಗಳಿನಿಂದ ಮಾಡಿದೆ ಎಂಬ ಆರೋಪ ಕೇಳಿ ಬಂದಿದ್ದು, ಪ್ರತಿಭಟನೆಯ ಹಾದಿ ಹಿಡಿಯುವಂತಾಗಿದೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಬಿಬಿಎಂಪಿ ಕಸ ಗುತ್ತಿಗೆದಾರರ ಮತ್ತು ಟಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎನ್. ಬಾಲಸುಬ್ರಹ್ಮಣ್ಯ ಇಲ್ಲಿಯವರೆಗೂ 198 ವಾಡ್ ಗಳಲ್ಲಿಯೂ ಕಸದ ಸಂಗ್ರಹಿಸುವ ಗುತ್ತಿಗೆ ವಾಹನಗಳ ಜಿಲ್ ಪಾವತಿಸಿಲ್ಲ. ಈವರೆಗೂ ಒಟ್ಟಾರೆ 500 ಕೋಟಿ ಬಿಲ್ ಬಾಕಿ ಇದೆ ಎಂದು ಹೇಳಿದರು.
ವಾಹನಗಳಲ್ಲಿ ತ್ಯಾಜ್ಯ ಸಂಗ್ರಹಿಸಿ ಕಾಂಪ್ಯಾಕ್ಟರ್‌ಗೆ ವರ್ಗಾಯಿಸಿ ಸಮರ್ಪಕ ವಿಲೇವಾರಿ ಮೂಲಕ ನಗರದ ಸ್ವಚ್ಛತೆ ಕಾಪಾಡಲಾಗುತ್ತಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಪ್ರತಿಭಟನೆಗೆ ಮುಂದಾದಾಗ ಸಾಕಷ್ಟು ಸಮಸ್ಯೆಯಾಗಿತ್ತು. ಆದರೂ ಬಿಬಿಎಂಪಿ ಮಾತ್ರ ಬಾಕಿ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಈ ಹಿಂದೆ ಮೂರು ಬಾರಿ ಮುಖ್ಯ ಆಯುಕ್ತರು, ಆಡಳಿತಾಧಿ ಕಾಲ ಮತ್ತು ಸರ್ಕಾರ ಮಧ್ಯಸ್ಥಿಕ ವಹಿಸಿ ಸಮಸ್ಯೆ ಪರಿಹಾರದ ಭರವಸೆ ನೀಡಿದ್ದರು. ಆದರೆ, ಈವರೆಗೆ ಕ್ರಮ ಕೈಗೊಂಡಿಲ್ಲ. ಸರ್ಕಾರವೇ ಮಧ್ಯ ಪ್ರವೇಶಿಸಿ ಮಾಸಿಕ ಬಿಲ್ ಪಾವತಿಗೆ ನಿಯಮ ರೂಪಿಸುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ತಿಳಿಸಿದರು.
ತೆರಿಗೆ ರೂಪದಲ್ಲಿ ಲಕ್ಷಾಂತರ ಹಣ ನಷ್ಟ
ಪ್ರತಿ ತಿಂಗಳ ದಿನಾಂಕ 15ರೊಳಗೆ ಕಾರ್ಮಿಕರು ಇಎಸ್‌ಐ ಮತ್ತು ಪಿಎಫ್ ಪಾವತಿಸದಿದ್ದರೆ ಅದನ್ನು ಮಾಲಿಕರ ಆದಾಯವೆಂದು ಪರಿಗಣಿಸಿ ಶೇ.33ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.
ಓದಿ: ಸಿಎ ಪರೀಕ್ಷೆ ಪಾಸ್ ಮಾಡಿದ ಜವಳಿ ಕೆಲಸಗಾರನ ಮಗ, ಸರ್ಕಾರಿ ಶಾಲೆ ವಿದ್ಯಾರ್ಥಿನಿ
ಸದ್ಯ ನೂರಾರು ಕೋಟಿ ಬಿಲ್ ಬಾಕಿ ಇರುವ ಪರಿಣಾಮ ತೆರಿಗೆ ರೂಪದಲ್ಲಿ ಲಕ್ಷಾಂತರ ಹಣ ನಷ್ಟವಾಗುತ್ತಿದೆ. ಆದ್ದರಿಂದ ಪ್ರತಿ ತಿಂಗಳು ದಿನಾಂಕ 10 ರೊಳಗೆ ಬಿಲ್ ಪಾವತಿಗೆ ಕ್ರಮ ವಹಿಸಬೇಕು. ರಸ್ತೆ, ಬೀದಿ ಗುಡಿಸುವ ಪೌರ ಕಾರ್ಮಿಕರಿಗೆ ನೇರವಾಗಿ ವೇತನ ನೀಡುವಂತೆ ನಮಗೂ ಸಮರ್ಪಕವಾಗಿ ವೇತನ ನೀಡಬೇಕು ಎಂದು ಎಸ್.ಎನ್. ಬಾಲಸುಬ್ರಹ್ಮಣ್ಯ ಆಗ್ರಹಿಸಿದರು.