ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ರಾಜ್ಯದ ವಿಚಾರಗಳ ಕುರಿತು ಚರ್ಚಿಸಲು ನಾಲ್ಕೈದು ದಿನದಲ್ಲಿ ದೆಹಲಿಗೆ ತೆರಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಬಾಕಿ ಇದೆ. ಈ ಸಂಬಂಧ ವರಿಷ್ಠರ ಜೊತೆ ಚರ್ಚೆ ನಡೆಸಲಾಗುತ್ತದೆ. ಇನ್ನೂ ಮೂರು ನಾಲ್ಕು ದಿನದಲ್ಲಿ ನವದೆಹಲಿಗೆ ತೆರಳಲು ಚಿಂತನೆ ನಡೆಸಿದ್ದು, ಅನುಮತಿ ಸಿಗುತ್ತಿದ್ದಂತೆ ದೆಹಲಿಗೆ ತೆರಳುವುದಾಗಿ ಸಿಎಂ ತಿಳಿಸಿದ್ದಾರೆ.
ಸಂಪುಟದಲ್ಲಿ ಆರು ಸ್ಥಾನಗಳು ಖಾಲಿ ಉಳಿದಿವೆ. ಪರಿಷತ್ ಸ್ಥಾನಕ್ಕೆ ಆಯ್ಕೆಯಾಗಿರುವ ಎಂಟಿಬಿ ನಾಗರಾಜ್, ಆರ್.ಶಂಕರ್, ಹೆಚ್.ವಿಶ್ವನಾಥ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದರ ಜೊತೆ ಹಿರಿಯ ನಾಯಕ ಉಮೇಶ್ ಕತ್ತಿ ಸೇರಿದಂತೆ ಮೂಲ ಬಿಜೆಪಿಗರನ್ನೂ ಪರಿಗಣಿಸಬೇಕಿದೆ.
ಸದ್ಯ ವರಿಷ್ಠರ ಜೊತೆ ಮಾತುಕತೆ ನಡೆಸಿ ಅಧಿವೇಶನಕ್ಕೂ ಮೊದಲೇ ಸಂಪುಟ ವಿಸ್ತರಣೆ ಮಾಡಲು ಸಿಎಂ ಚಿಂತನೆ ನಡೆಸಿದ್ದು, ಹೈಕಮಾಂಡ್ ಅನುಮತಿ ಸಿಗುತ್ತಿದ್ದಂತೆ ಸಿಎಂ ದೆಹಲಿಗೆ ತೆರಳಲಿದ್ದಾರೆ.