ಬೆಂಗಳೂರು: ಮಿಷನ್ 150 ಕುರಿತು ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ. ಚುನಾವಣಾ ರೋಡ್ ಮ್ಯಾಪ್ ಕುರಿತು ಪಕ್ಷದ ನಾಯಕರು ಮಾರ್ಗದರ್ಶನ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ತಿಳಿಸಿದ್ದಾರೆ.
ಜಿಲ್ಲೆಯ ಪ್ರಮುಖರು ಸೇರಿ ನಾಲ್ಕು ಸಭೆ: ಪಕ್ಷದ ಕಚೇರಿಯಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಗುರುವಾರ ರಾಜ್ಯ ಪದಾಧಿಕಾರಿಗಳು, ವಿಭಾಗ ಪದಾಧಿಕಾರಿಗಳು, ಜಿಲ್ಲೆಯ ಪ್ರಮುಖರು ಸೇರಿ ನಾಲ್ಕು ಸಭೆ ನಡೆಸಲಾಯಿತು. ಮೂರು ಲಕ್ಷಕ್ಕಿಂತ ಕಡಿಮೆ ಸಾಲ ಪಡೆದ ರೈತರಿಗೆ ಬಡ್ಡಿ ಕಡಿತ ಮಾಡುವ ಕೇಂದ್ರದ ನಿರ್ಧಾರ ಸ್ವಾಗತಿಸಿ ಪ್ರಧಾನಿ ಮೋದಿ ಅವರಿಗೆ ಮತ್ತು ಕ್ರೀಡಾಪಟುಗಳಿಗೆ ಶೇ.2 ರಷ್ಟು ಉದ್ಯೋಗ ಮೀಸಲಾತಿ ಕಲ್ಪಿಸಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು ಎಂದರು.
ಪ್ರವಾಸ ಮಾಡಲು ನಿರ್ಧಾರ: ಮುಂಬರಲಿರುವ ವಿಧಾನಸಭಾ ಚುನಾವಣೆಗೆ ನಮ್ಮ ಮಿಷನ್ 150 ಕುರಿತು ಚರ್ಚೆ ನಡೆಸಲಾಯಿತು. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮಾರ್ಗದರ್ಶನ ಮಾಡಿದ್ದು, ಚುನಾವಣಾ ಸಿದ್ಧತೆ ಕುರಿತು ಹಲವು ವಿಷಯ ತಿಳಿಸಿದ್ದಾರೆ. ಮುಂಬರಲಿರುವ ಚುನಾವಣೆ ದೃಷ್ಟಿಯಲ್ಲಿರಿಸಿ 50 ಕ್ಷೇತ್ರದಲ್ಲಿ ಸಿಎಂ ನೇತೃತ್ವದಲ್ಲಿ ಆಡಳಿತಾತ್ಮಕ ಪ್ರವಾಸ ಮತ್ತು ಕಟೀಲ್ ನೇತೃತ್ವದಲ್ಲಿ 50 ಕ್ಷೇತ್ರದಲ್ಲಿ ಸಂಘಟನಾತ್ಮಕ ಪ್ರವಾಸ ಕೈಗೊಳ್ಳಲು ನಿರ್ಧರಿಸಲಾಗಿದೆ. ಪ್ರತಿ ದಿನ ಎರಡು ಕ್ಷೇತ್ರ ಪ್ರವಾಸ ಮಾಡಲಾಗುವುದು ಎಂದು ಹೇಳಿದರು.
ಪ್ರವೀಣ್ ನೆಟ್ಟಾರು ಹತ್ಯೆ ನಂತರ ಕಾರ್ಯಕರ್ತರ ಆಕ್ರೋಶ ಹೆಚ್ಚಾಗಿದ್ದು, ಯುವ ಮೋರ್ಚಾದ ಕೆಲವರು ರಾಜೀನಾಮೆ ನೀಡಿದ್ದರು. ಈ ವಿಚಾರದಲ್ಲಿ ಸಣ್ಣಪುಟ್ಟ ವ್ಯತ್ಯಾಸವಾಗಿತ್ತು. ಅವರೆಲ್ಲರ ಜೊತೆ ಮಾತನಾಡಿ ಮನವೊಲಿಸಿದ್ದೇವೆ, ಎಲ್ಲವೂ ಈಗ ತಹಬದಿಗೆ ಬಂದಿದೆ. ಇದರ ಜೊತೆಗೆ ಇನ್ಮುಂದೆ ಶಾಸಕರು ಸೇರಿದಂತೆ ಪಕ್ಷದ ಯಾವ ಪದಾಧಿಕಾರಿಗಳೂ ಅನಾವಶ್ಯಕವಾಗಿ ಮಾತನಾಡಬಾರದು ಎನ್ನುವ ಸೂಚನೆ ನೀಡಿದ್ದಾರೆ. ಗೊಂದಲ ಸೃಷ್ಟಿಸುವ ಹೇಳಿಕೆ ತಡೆಯಲು ಇಂತಹ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಏಳು ಸಮಾವೇಶ ನಡೆಸಲು ನಿರ್ಧಾರ: ಸರ್ಕಾರದ ಒಂದು ವರ್ಷದ ಸಾಧನೆಯ ಭಾಗವಾಗಿ ರಾಜ್ಯದಲ್ಲಿ ಏಳು ಸಮಾವೇಶ ಆಯೋಜಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಹುಬ್ಬಳ್ಳಿ, ಬೆಂಗಳೂರು, ಮಂಗಳೂರು, ಶಿವಮೊಗ್ಗ, ದೊಡ್ಡಬಳ್ಳಾಪುರ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಒಂದು ಕಾರ್ಯಕ್ರಮವಿರಲಿದೆ. ಆದರೆ ಇನ್ನು ದಿನಾಂಕ ನಿಗದಿಯಾಗಿಲ್ಲ. ರೈತ ಸಮಾವೇಶಕ್ಕೆ ಮೋದಿ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯಪಾಲ ಗೆಹ್ಲೋಟ್ ಭೇಟಿ ಮಾಡಿ ಮಾತುಕತೆ ನಡೆಸಿದ ಯಡಿಯೂರಪ್ಪ
ಮೋದಿ ಜನ್ಮದಿನದ ಅಂಗವಾಗಿ 15 ದಿನ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಸೇವಾ ಕಾರ್ಯಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಸ್ವಚ್ಚತೆ, ರಕ್ತದಾನ ಶಿಬಿರ ಇತ್ಯಾದಿಗಳನ್ನು ಆಯೋಜಿಸಲಾಗುತ್ತದೆ. ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದ ಘಟನೆ ಬಗ್ಗೆ ಮಾಹಿತಿ ಇಲ್ಲ, ಆ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡಲಿದ್ದೇನೆ ಎಂದು ತಿಳಿಸಿದರು.