ಬೆಂಗಳೂರು: ಸಹಾಯಹಸ್ತ ಪಾಸುಗಳ ವಿತರಣೆಯನ್ನು ಸ್ಥಗಿತಗೊಳಿಸುವಂತೆ ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ. ಬೆಂಗಳೂರು ನಗರದ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸದ ಕಾರ್ಮಿಕರಿಗೆ ಉಚಿತವಾಗಿ ಸಹಾಯಹಸ್ತ ಪಾಸುಗಳನ್ನು ವಿತರಿಸಲಾಗುತ್ತಿತ್ತು. ಇದೀಗ ಸಹಾಯಹಸ್ತ ಪಾಸುಗಳ ವಿತರಣೆಯನ್ನು ಸೂಕ್ತಾಧಿಕಾರಿಗಳ ನಿರ್ದೇಶನದಂತೆ ಜೂನ್ 1 ರಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲು ಸೂಚಿಸಿದೆ.
ಅಂದಹಾಗೇ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ(ಬಿಎಂಟಿಸಿ) ಬಸ್ಸುಗಳಲ್ಲಿ ಪ್ರಯಾಣಿಸಲು ನೋಂದಾಯಿತ ನಿರ್ಮಾಣ ಕಾರ್ಮಿಕರಿಗೆ ನೀಡುವ ರಿಯಾಯಿತಿ ಬಸ್ ಪಾಸ್ ಇದಾಗಿದೆ. ಈ ಸೌಲಭ್ಯವು ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಖಾಯಂ ಆಗಿ ವಾಸವಾಗಿರುವ ನೋಂದಾಯಿತ ನಿರ್ಮಾಣ ಕಾರ್ಮಿಕರು ಬೆಂಗಳೂರಿನಲ್ಲಿ ಕೆಲಸದ ಸ್ಥಳಕ್ಕೆ ಪ್ರಯಾಣಿಸಲು ಬಿಎಂಟಿಸಿ ಬಸ್ ಪಾಸ್ ಪಡೆಯಲು ಈ ನಿಯಮದಡಿ ಅರ್ಹರಾಗಿರುತ್ತಾರೆ.
![Directive issued by BMTC](https://etvbharatimages.akamaized.net/etvbharat/prod-images/15436690_pass.jpg)
ಸೂಕ್ತ ಫಲಾನುಭವಿಗಳಿಗೆ ಸಿಗ್ತಿಲ್ವಾ ಪಾಸ್: ನೋಂದಾಯಿತ ಫಲಾನುಭವಿಯ ಗುರುತಿನ ಚೀಟಿ, ಆಧಾರ್ ಕಾರ್ಡ್ ನೀಡಿ ಪಾಸ್ ಮಾಡಿಸಿಕೊಳ್ಳಬೇಕು. ಆದರೆ ಇತ್ತೀಚೆಗೆ ಕಾರ್ಮಿಕರೆಂದು ಹೇಳಿಕೊಂಡು ಸಿಕ್ಕ ಸಿಕ್ಕವರೆಲ್ಲ ಸಹಾಯ ಹಸ್ತ ಪಾಸ್ಗಳನ್ನು ಪಡೆಯುತ್ತಿದ್ದಾರೆ. ಇದರಿಂದ ನಿಜಕ್ಕೂ ಅಗತ್ಯವಿರುವ ಸೂಕ್ತ ಫಲಾನುಭವಿಗಳಿಗೆ ಬಸ್ ಪಾಸ್ ಸಿಗದಂತಾಗಿದೆ. ಹೀಗಾಗಿ ಬಿಎಂಟಿಸಿ ದಿಢೀರ್ ಸಹಾಯ ಹಸ್ತ ಪಾಸ್ ಸ್ಥಗಿತ ಮಾಡಲು ಸೂಚಿಸಿದೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ಬಿಎಂಟಿಸಿ ಬಸ್ ಮಾಸಿಕ ಪಾಸ್ ನಿಯಮದಲ್ಲಿ ಮಹತ್ವದ ಬದಲಾವಣೆ!