ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ 545 ಸಬ್ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವೆಸಗಿರುವ ಸಂಬಂಧ ಸಿಐಡಿ ಪೊಲೀಸರು ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ಪೂರ್ಣಗೊಳಿಸಿದ ಬಳಿಕ ಫಲಿತಾಂಶ ಪ್ರಕಟಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಪಿಎಸ್‍ಐ ಲಿಖಿತ ಪರೀಕ್ಷೆ ಅಕ್ರಮ ಸಂಬಂಧ ಏ.7ರಂದು ಪ್ರಕರಣ ದಾಖಲಿಸಿಕೊಂಡಿದ್ದ ಕಲಬುರಗಿ ಪೊಲೀಸರು, ನಾಲ್ವರು ಪರೀಕ್ಷಾರ್ಥಿಗಳು ಹಾಗೂ ಮೂವರು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೂ ಶೋಧ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆ 2021ರ ಅಕ್ಟೋಬರ್ 3ರಂದು 545 ಪಿಎಸ್‍ಐಗಳ ನೇಮಕಕ್ಕೆ ಲಿಖಿತ ಪರೀಕ್ಷೆ ನಡೆಸಿತ್ತು. 92 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಇದಾದ ಬಳಿಕ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ದೂರುಗಳು ಬಂದಿದ್ದವು. ಏ.7ರಂದು ಪ್ರಕರಣ ದಾಖಲಾದ ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ಮೇರೆಗೆ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ತನಿಖೆ ಕೈಗೊಂಡ ಸಿಐಡಿ ಪೊಲೀಸರು ಏಳು ಮಂದಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಪಡೆದಿದ್ದಾರೆ ಎಂದು ಪ್ರವೀಣ್ ಸೂದ್ ತಿಳಿಸಿದ್ದಾರೆ.
ಗೃಹ ಸಚಿವರ ಸೂಚನೆ ಮೇರೆಗೆ ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ 545 ಮಂದಿಯಲ್ಲಿ ಪ್ರತಿಯೊಬ್ಬರ ಪೂರ್ವಾಪರ ಪರಿಶೀಲಿಸಿ ತುರ್ತಾಗಿ ತನಿಖೆ ನಡೆಸಲಾಗುವುದು. ಅಕ್ರಮವೆಸಗಲು ಸಹಕಾರ ನೀಡಿರುವ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧವೂ ಕ್ರಮ ಜರುಗಿಸಲಾಗುವುದು. ನೈಜ ಅಭ್ಯರ್ಥಿಗಳಿಗೆ ಯಾವುದೇ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತನಿಖೆ ಪೂರ್ಣಗೊಂಡ ಬಳಿಕ 402 ಪಿಎಸ್‍ಐ ನೇಮಕಕ್ಕೆ ಲಿಖಿತ ಪರೀಕ್ಷೆ: 402 ಪಿಎಸ್‍ಐ ಹುದ್ದೆಗಳ ನೇಮಕ ಬಯಸಿ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳು 2021ರ ಡಿಸೆಂಬರ್‌ನಲ್ಲಿ ದೇಹದಾರ್ಢ್ಯ ಪರೀಕ್ಷೆ ಮುಗಿಸಿ ಲಿಖಿತ ಪರೀಕ್ಷೆಗೆ ಕಾಯುತ್ತಿದ್ದಾರೆ. 545 ಪಿಎಸ್‍ಐ ಹುದ್ದೆಗಳ ನೇಮಕಾತಿ ಪ್ರಕರಣದ ತನಿಖೆ ಮುಗಿದ ಬಳಿಕ ಐದು ತಿಂಗಳಿಂದ ಕಾಯುತ್ತಿರುವ 402 ಪಿಎಸ್‍ಐ ಹುದ್ದೆ ಆಕಾಂಕ್ಷಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ಡಿಐಜಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ.. ಕಲಬುರಗಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮನೆಗೆ ಸಿಐಡಿ ತಂಡ ದಾಳಿ.. ಲೇಡಿ ಲೀಡರ್ ನಾಪತ್ತೆ..