ದೇವನಹಳ್ಳಿ: ಗಾಂಧಿ ಜಯಂತಿಯ ವರೆಗೆ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ನಿಷೇಧದ ಕುರಿತು ಅರಿವು ಮೂಡಿಸಲಿದ್ದು, ಆ ಬಳಿಕ ಅಂಗಡಿ ಅಥವಾ ಎಲ್ಲೇ ಆದರೂ ಪ್ಲಾಸ್ಟಿಕ್ ಬಳಕೆ ಮಾಡಿದ್ದು ಕಂಡರೆ ಅಂತಹವರಿಗೆ ದಂಡ ವಿಧಿಸಲಾಗುತ್ತದೆ ಎಂದು ದೇವನಹಳ್ಳಿ ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ ಎಚ್ಚರಿಕೆ ನೀಡಿದ್ದಾರೆ.
ದೇವನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪುರಸಭೆ ವತಿಯಿಂದ ವಿದ್ಯಾರ್ಥಿಗಳಲ್ಲಿ ಪ್ಲಾಸ್ಟಿಕ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಶೂನ್ಯ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಹನುಮಂತೇಗೌಡ, ಕೇಂದ್ರ ಸರ್ಕಾರ ಪ್ಲಾಸ್ಟಿಕ್ ಮುಕ್ತ ದೇಶ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದು, ಅಕ್ಟೋಬರ್ 2 ರಿಂದ ಇಡೀ ದೇಶವೇ ಪ್ಲಾಸ್ಟಿಕ್ ಮುಕ್ತವಾಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳಲ್ಲಿ ಪ್ಲಾಸ್ಟಿಕ್ ಮುಕ್ತದ ಕುರಿತು ಅರಿವು ಮೂಡಿಸಲಾಗುತ್ತಿದೆ. ಗಾಂಧಿ ಜಯಂತಿ ಬಳಿಕವೂ ನಗರದಲ್ಲಿ ಯಾರಾದರೂ ಪ್ಲಾಸ್ಟಿಕ್ ಬಳಕೆ ಮಾಡಿದರೆ ತಕ್ಷಣವೇ ಅವರಿಗೆ ದಂಡ ವಿಧಿಸಲಾಗುವುದು ಎಂದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಮುಕ್ತದ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯ್ತು.