ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದೀರಾ.. ಹಾಗಾದರೆ ನಾವು ಕೊಡುವ ಔಷಧಿ ಸೇವಿಸಿ. ಕೆಲವೇ ದಿನಗಳಲ್ಲಿ ರೋಗ ಮಾಯವಾಗಲಿದೆ ಎಂದು ಭರವಸೆ ನೀಡಿ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ಲಕ್ಷಾಂತರ ರೂ. ವಸೂಲಿ ಮಾಡಿದ್ದ ಆರು ಮಂದಿ ವಂಚಕರನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.
ವಂಚನೆಗೊಳಗಾದ ಮಲ್ಲೇಶ್ವರಂ ನಿವಾಸಿ ರವಿ ಬಿ.ಆರ್. ಅಂಕೂರ್ ಎಂಬುವರು ನೀಡಿದ ದೂರಿನ ಮೇರೆಗೆ ರಮಾಕಾಂತ್,ಜಿತೇನ್,ಮಂಜುನಾಥ್, ಶಿವಲಿಂಗ, ಕಲ್ಲೋಳಪ್ಪ, ಸಂದೀಪ್ ಎಂಬುವರನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಗಳಾದ ದೀಪಕ್, ಶಿವಾನಂದ್, ಸಜೀತ್ ಎಂಬುವರು ತಲೆಮರೆಸಿಕೊಂಡಿದ್ದು ಪತ್ತೆಗಾಗಿ ಶೋಧ ಕಾರ್ಯ ಚುರುಕುಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಕ್ಕರೆ ಕಾಯಿಲೆ ಹಾಗೂ ಸೊಂಟ ನೋವಿನಿಂದ ಬಲುತ್ತಿದ್ದ ರವಿ ಎಂಬುವರು ಚಿಕಿತ್ಸೆ ಪಡೆದುಕೊಳ್ಳಲು ಕಳೆದ ವರ್ಷ ಸೆ.29ರಂದು ಜಯನಗರ 3ನೇ ಹಂತದಲ್ಲಿರುವ ಆರ್ಥೊಪೆಡಿಕ್ ಸೆಂಟರ್ಗೆ ಹೋಗಿದ್ದರು. ಚಿಕಿತ್ಸೆ ಪಡೆದು ಹೊರಬರುವಾಗ ರವಿಯವರನ್ನು ಗುರಿಯಾಗಿಸಿಕೊಂಡು ಮಾತಿಗಿಳಿದ ಆರೋಪಿ ರಮೇಶ್ ಎಂಬಾತ ಶುಗರ್ನಿಂದ ಬಲುತ್ತಿದ್ದೀರಾ..? ಹಾಗಾದರೆ ನನ್ನ ಅಣ್ಣ ಸೀತಾರಾಂ ಎಂಬುವರು ರಾಜಾಜಿನಗರದಲ್ಲಿರುವ ಧನ್ವಂತರಿ ಆರ್ಯುವೇದಿಕ್ ಕ್ಲಿನಿಕ್ನಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿ ಮಧುಮೇಹ ಹಾಗೂ ಇನ್ನಿತರ ಖಾಯಿಲೆಗಳಿಗೆ ಒಳ್ಳೆಯ ಔಷಧ ಕೊಡುತ್ತಾರೆ. ಕೆಲವು ದಿನಗಳ ಕಾಲ ನಿರಂತರವಾಗಿ ಸೇವಿಸಿದರೆ ಖಾಯಿಲೆ ನಿವಾರಣೆಯಾಗಲಿದ್ದು, ಇದಕ್ಕೆ 2,59,869 ರೂ. ಖರ್ಚಾಗಲಿದೆ ಎಂದಿದ್ದಾನೆ.
ಇದನ್ನು ನಂಬಿ ಆರೋಪಿ ಮಾತಿಗೆ ಮನ್ನಣೆ ನೀಡಿ ಆತ ಹೇಳಿದ ಕ್ಲಿನಿಕ್ಗೆ ತೆರಳಿದ್ದಾರೆ. ಪ್ರಕರಣದ ಇನ್ನಿತರ ಆರೋಪಿಗಳು ವೈದ್ಯರು ಹಾಗೂ ಸಿಬ್ಬಂದಿ ಎಂದು ಪರಿಚಯಿಸಿಕೊಂಡು ವ್ಯವಸ್ಥಿತವಾಗಿ ರವಿ ಅವರಿಂದ 2.50 ಲಕ್ಷ ರೂ. ಹಣದ ಚೆಕ್ ಪಡೆದುಕೊಂಡಿದ್ದಾರೆ. ಔಷಧ ನೀಡಿ ಕೆಲವೇ ದಿನಗಳಲ್ಲಿ ಖಾಯಿಲೆ ನಿಯಂತ್ರಣಕ್ಕೆ ಬರಲಿದೆ. ಒಂದು ವೇಳೆ ಕಂಟ್ರೋಲ್ಗೆ ಬರದಿದ್ದರೆ ಶೇ 80ರಷ್ಟು ಹಣ ವಾಪಸ್ ನೀಡುವುದಾಗಿ ಭರವಸೆ ನೀಡಿದ್ದರು.
ಕೆಲ ದಿನಗಳ ಔಷಧ ಸೇವಿಸಿದ ಅವರಿಗೆ ಮೈಯಲ್ಲಿ ಉರಿ ಕಂಡು ಬಂದಿತ್ತು. ಅಲ್ಲದೆ, ಖಾಯಿಲೆ ಕಡಿಮೆಯಾಗಿರಲಿಲ್ಲ. ಹೀಗಾಗಿ ಕ್ಲಿನಿಕ್ ಬಳಿ ತೆರಳಿದಾಗ ಬೀಗ ಹಾಕಿರುವುದನ್ನು ಕಂಡು ತಾನು ಮೋಸ ಹೋಗಿರುವುದಾಗಿ ಗೊತ್ತಾಗಿದೆ. ಈ ಸಂಬಂಧ ತಿಲಕ್ ನಗರ ಪೊಲೀಸರಿಗೆ ದೂರು ನೀಡಿದ ಮೇರೆಗೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಹತ್ತಾರು ಹಿರಿಯ ನಾಗರಿಕರಿಗೂ ಮೋಸ: ಹಿರಿಯ ನಾಗರಿಕರನ್ನು ತಮ್ಮ ಮೋಸದ ಜಾಲಕ್ಕೆ ಗುರಿಯಾಗಿಸಿಕೊಳ್ಳುತ್ತಿದ್ದ ಆರೋಪಿಗಳು ವೃದ್ಧರು ಹಾಗೂ ವೃದ್ಧೆಯರು ಅನುಭವಿಸುತ್ತಿರುವ ಖಾಯಿಲೆ ಅರಿತುಕೊಂಡು ಅವರ ಬಳಿ ಹೋಗಿ ಗುಣಮಟ್ಟದ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಹತ್ತಾರು ಜನರಿಗೆ ಮೋಸ ಮಾಡಿರುವುದು ಗೊತ್ತಾಗಿದೆ.
ಡಿ.ಆರ್. ಮೂರ್ತಿ ಎಂಬುವರಿಗೆ 83 ಸಾವಿರ, ಈಶ್ವರ್ ರಾವ್ ಎಂಬುವರಿಗೆ 3 ಲಕ್ಷ ಹಾಗೂ ಲಕ್ಷ್ಮೀದಾಸ್ ಎಂಬುವರಿಂದ 27 ಸಾವಿರ ರೂ. ಪಡೆದು ವಂಚಿಸಿದ್ದಾರೆ. ತಿಲಕ್ ನಗರ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಮೋಸ ಮಾಡಿರುವ ಸಾಧ್ಯತೆಯಿದ್ದು, ಈ ಬಗ್ಗೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.
ಸೀಮೆ ಸುಣ್ಣದ ಪುಡಿಯನ್ನು ತೈಲದಲ್ಲಿ ಬೆರಸಿ ಮೋಸ ಮಾಡುತ್ತಿದ್ದ ಗ್ಯಾಂಗ್ ಇದಾಗಿದ್ದು, ಯಾವುದೇ ಮುಂಜಾಗೃತ ಕ್ರಮ ಕೈ ಗೊಳ್ಳದೆ ನಕಲಿ ಔಷಧ ಮಾರಾಟ ಮಾಡುತ್ತಿದ್ದರು, ಪ್ರಕರಣದ ಸಂಬಂಧ 6 ಮಂದಿ ಆರೋಪಿಗಳನ್ನು ಈವರೆಗೆ ವಶಕ್ಕೆ ಪಡೆಯಲಾಗಿದ್ದು, ಬಂಧಿತರಿಂದ 5 ಲಕ್ಷ ಹಣ ಜಪ್ತಿಮಾಡಲಾಗಿದೆ.