ಬೆಂಗಳೂರು: ತಾ.ಪಂ, ಜಿ.ಪಂಚಾಯಿತಿ ಚುನಾವಣೆ ಮುಂದೂಡುವ ಅಭಿಪ್ರಾಯ ವ್ಯಕ್ತವಾಗಿದ್ದು, ಸಂಪುಟ ಸಭೆಯಲ್ಲಿ ಚರ್ಚಿಸಿ ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆ ಚುನಾವಣೆ ಮುಂದೂಡಿಕೆ ಮಾಡುವ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನನ್ನ ಅಭಿಪ್ರಾಯವೂ ಅದೇ ಆಗಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಆ ನಿರ್ಧಾರವನ್ನು ನಂತರ ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.
ಅವಧಿ ಮುಗಿದ ಕಡೆ ಆಡಳಿತಾಧಿಕಾರಿ ಹಾಕಲಾಗುತ್ತದೆ. ಈ ವಿಚಾರದ ಬಗ್ಗೆಯೂ ಚರ್ಚೆ ನಡೆದಿದೆ. ಕೋವಿಡ್ ಹೆಚ್ಚು ಉಲ್ಬಣವಾಗುತ್ತಿದೆ. ಈ ಚುನಾವಣೆಯಲ್ಲಿ ಸುಮಾರು ಮೂರೂವರೆ ಕೋಟಿ ಜನ ಭಾಗಿಯಾಗಲಿದ್ದಾರೆ. ಹಾಗಾಗಿ ಮುಂದೂಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.
ಕೆರೆ, ಕಟ್ಟೆಗಳ ಅಭಿವೃದ್ಧಿಗೆ ನಿರ್ಧಾರ: ಕೆರೆ, ನಾಲೆ, ಕಲ್ಯಾಣಿ, ಗೋಕಟ್ಟೆ ಅಭಿವೃದ್ಧಿ ಮಾಡಲು ನಿರ್ಧರಿಸಿದ್ದು, ನರೇಗಾದಡಿ ಈ ಕಾರ್ಯಕ್ರಮ ನಡೆಸುತ್ತೇವೆ. ಜಿಲ್ಲಾ ಪಂಚಾಯತ್ ಕೆರೆಗಳನ್ನು ಗ್ರಾಮ ಪಂಚಾಯತ್ ಸುಪರ್ದಿಗೆ ತೆಗೆದುಕೊಂಡು ಅಭಿವೃದ್ಧಿ ಪಡಿಸಲಾಗುತ್ತದೆ. ಮಳೆ ನೀರನ್ನು ಇಂಗಿಸುವ ಕೆಲಸ ಮಾಡ್ತೇವೆ. ಇದರ ಬಗ್ಗೆ ಟಾರ್ಗೆಟ್ ಕೂಡ ಕೊಟ್ಟಿದ್ದೇವೆ. ಕೆರೆ ಅಭಿವೃದ್ಧಿಯನ್ನು ಗ್ರಾಮಪಂಚಾಯ್ತಿಗೆ ಕೊಡ್ತೇವೆ ಎಂದರು.
ಗ್ರಾಮ ಮಟ್ಟದಲ್ಲಿ ಕೋವಿಡ್ ಟಾಸ್ಕ್ ಫೋರ್ಸ್: ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಟಾಸ್ಕ್ ಫೋರ್ಸ್ ಮಾಡಿದ್ದೆವು. ಹಿಂದೆ ಈ ಕಾರ್ಯಕ್ರಮ ಯಶಸ್ವಿಯಾಗಿತ್ತು. ಈಗಲೂ ಅದನ್ನ ಮುಂದುವರಿಸುತ್ತೇವೆ. ಟಾಸ್ಕ್ ಫೋರ್ಸ್ ಗ್ರಾಮ ಮಟ್ಟದಲ್ಲಿ ಕೊರೊನಾ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಪಿಡಿಒ ಅಧಿಕಾರಿಗಳು ಟಾಸ್ಕ್ ಫೋರ್ಸ್ ನೇತೃತ್ವ ವಹಿಸಲಿದ್ದಾರೆ. ಗ್ರಾ.ಪಂ ಮಟ್ಟದಲ್ಲೇ ಆರೂವರೆ ಲಕ್ಷ ವ್ಯಾಕ್ಸಿನ್ ಹಾಕಲಾಗಿದೆ. ಕೇವಲ 2 ಸಾವಿರ ಗ್ರಾ.ಪಂಗಳಲ್ಲಿ ಲಸಿಕೆ ಹಾಕಲಾಗಿದೆ. ಎಲ್ಲಾ ಪಂಚಾಯಿತಿ ಸೇರಿದರೆ 15 ಲಕ್ಷ ವ್ಯಾಕ್ಸಿನ್ ಹಾಕಬಹುದು ಎಂದರು.
ನನ್ನ ಅಭಿಪ್ರಾಯ ಲಾಕ್‌ಡೌನ್ ಬೇಡ: ದೆಹಲಿಯಲ್ಲಿ ಲಾಕ್ ಡೌನ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅತಿ ಹೆಚ್ಚಿನ ಪ್ರಕರಣಗಳು ಅಲ್ಲಿ ಬರುತ್ತಿವೆ. ಆ ಪರಿಸ್ಥಿತಿ ಇರೋದ್ರಿಂದ ಒಂದು ವಾರ ಲಾಕ್ ಡೌನ್ ಮಾಡಿದ್ದಾರೆ. ರಾಜ್ಯದಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಕೆಲ ಜಿಲ್ಲೆಗಳಲ್ಲಿ ಸೋಂಕಿನ ಸಂಖ್ಯೆ ಹೆಚ್ಚಿದೆ. ಉಳಿದಂತೆ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳು ಇಲ್ಲ. ಬೆಂಗಳೂರಿಗೆ ಲಾಕ್ ಡೌನ್ ಬೇಕಾಗಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದರು ಸ್ಪಷ್ಟಪಡಿಸಿದರು.