ಬೆಂಗಳೂರು: ಕೋವಿಡ್ ಮತ್ತು ಪ್ರವಾಹ ನಿರ್ವಹಣೆಗೆ ಸಚಿವರನ್ನು ನಿಯೋಜಿಸುವ ಸಂಬಂಧ ಆದೇಶ ಹೊರಡಿಸಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ಔಪಚಾರಿಕ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್, ಪ್ರವಾಹ ಪರಿಸ್ಥಿತಿ ಬಗ್ಗೆ ಜಿಲ್ಲೆಗಳಿಗೆ ತೆರಳಿ ಪರಿಶೀಲನೆ ನಡೆಸಲು ಆದೇಶ ಹೊರಡಿಸುತ್ತೇನೆ. ಸಚಿವರು ಜಿಲ್ಲೆಗೆ ಹೋಗಿ ಮೂರನೇ ಅಲೆ, ಪ್ರವಾಹ ಪರಿಸ್ಥಿತಿ ವೀಕ್ಷಿಸಿ ಹೆಚ್ಚಿನ ಪರಿಹಾರ ನೀಡುವ ಸಂಬಂಧ ವರದಿ ನೀಡಲು ಸೂಚಿಸಿದ್ದೇನೆ ಎಂದರು.
ಕೋವಿಡ್ ಟಾಸ್ಕ್ ಫೋರ್ಸ್ ಪುನಾರಚನೆ ಮಾಡಲು ತೀರ್ಮಾನ ಮಾಡಲಾಗಿದೆ. ಖಾತೆ ಹಂಚಿಕೆ ಮಾಡಿದ ಬಳಿಕ ಈ ಕಾರ್ಯ ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಎಸ್ಟಿ ಸಮುದಾಯಕ್ಕೆ ನೀಡಲಾಗುವ ಎಸ್ಟಿಪಿ ಹಣವನ್ನು ಬೇರೆ ಬೇರೆ ಇಲಾಖೆಗೆ ಕೊಡಲಾಗುತ್ತಿದೆ. ಅದರಡಿ ನೀಡಲಾಗುವ ಯೋಜನೆಗಳ ಶೀಘ್ರ ಅನುಷ್ಠಾನಕ್ಕಾಗಿ ಎಸ್ಟಿ ಕಲ್ಯಾಣ ಸೆಕ್ರೆಟ್ರಿಯೇಟ್ ಮಾಡಲು ನಿರ್ಧರಿಸಲಾಗಿದೆ ಎಂದರು.
ಖಾತೆ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು, ಖಾತೆ ಹಂಚಿಕೆ ವಿಳಂಬ ಆಗುವುದಿಲ್ಲ. ಇನ್ನೆರಡು ದಿನಗಳಲ್ಲಿ ಖಾತೆ ಹಂಚಿಕೆ ಮಾಡಲಾಗುತ್ತದೆ. ಇಂತಹುದೇ ಖಾತೆನೇ ಬೇಕು ಎಂದು ಯಾವ ಸಚಿವರೂ ಒತ್ತಡ ಹಾಕಿಲ್ಲ. ನೀವು ಯಾವ ಖಾತೆ ಕೊಡುತ್ತೀರಾ ಅದನ್ನು ನಿಭಾಯಿಸುವುದಾಗಿ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸಚಿವ ಸ್ಥಾನ ವಂಚಿತರ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು, ಅವರೆಲ್ಲರೂ ನಮ್ಮವರೇ. ಅವರ ಜೊತೆ ಕೂತು ಮಾತನಾಡುತ್ತೇವೆ. ಅವರನ್ನು ಸಮಾಧಾನ ಮಾಡುತ್ತೇವೆ. ಮುಂದೆ ಅವರಿಗೆ ಅವಕಾಶ ಕೊಡುತ್ತೇವೆ ಎಂದರು.
13 ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಿರುವ ಸಚಿವರ ಮೂಲಕ 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗುತ್ತದೆ. ಸೂಕ್ತ ಆದವರನ್ನು ಆ ಪ್ರಾಂತ್ಯದಲ್ಲಿ ಬಳಸಿಕೊಳ್ಳುತ್ತೇವೆ ಎಂದರು.