ಬೆಂಗಳೂರು: ಲೇಖಕ ಹಾಗೂ ವಿಮರ್ಶಕ ಬೇಂದ್ರೆ ಕೃಷ್ಣಪ್ಪ ಬರೆದಿರುವ 'ಕುವೆಂಪು ಹನುಮದ್ದರ್ಶನ' ಕೃತಿಯನ್ನು ಉಪ ಮುಖ್ಯಮಂತ್ರಿ ಡಾ.ಸಿ ಎನ್ ಅಶ್ವತ್ಥ್ ನಾರಾಯಣ ಆನ್ಲೈನ್ ಮೂಲಕ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಕುವೆಂಪು ಅವರು ಮಾನವತೆ ದಾರಿಯನ್ನು ತಮ್ಮ ಕೃತಿಗಳ ಮೂಲಕ ಲೋಕಕ್ಕೆ ತಿಳಿಸಿದ ಮಹಾನ್ ಬರಹಗಾರರು. ಅಂತಹ ಕುವೆಂಪು ಅವರ ವಿರಚಿತ 'ರಾಮಾಯಣ ದರ್ಶನಂ' ಮಹಾಕೃತಿಯನ್ನು ಇಟ್ಟುಕೊಂಡು ಬೇಂದ್ರೆ ಕೃಷ್ಣಪ್ಪ ಅವರು ಬರೆದಿರುವ 'ಕುವೆಂಪು ಹನುಮದ್ದರ್ಶನ' ಕೃತಿಯನ್ನು ಕನ್ನಡ ಓದುಗರು ಆತ್ಮೀಯತೆಯಿಂದ ಸ್ವಾಗತಿಸಬೇಕು. ಇದನ್ನು ಲೋಕಾರ್ಪಣೆ ಮಾಡುವ ಅವಕಾಶ ಸಿಕ್ಕಿದ್ದು, ಮಹಾಭಾಗ್ಯವೆಂದೇ ತಿಳಿದಿದ್ದೇನೆ.
ವಿಮರ್ಶಕ ಚಂದ್ರಶೇಖರ ನಂಗಲಿ ಮಾತನಾಡಿ, ಬೇಂದ್ರೆ ಕೃಷ್ಣಪ್ಪನವರು ಬರೆದಿರುವ 'ಕುವೆಂಪು ಹನುಮದ್ದರ್ಶನ' ಕನ್ನಡ ಸಾರಸ್ವತ ಲೋಕಕ್ಕೆ ಸಿಗುತ್ತಿರುವ ಇನ್ನೊಂದು ಮಹಾನ್ ಕೃತಿ. ರಾಮಾಯಣವನ್ನು 'ಹನುಮಾಯಣ'ವೆಂದು ಗುರುತಿಸಿ, ಕುವೆಂಪು ಅವರ 'ರಾಮಾಯಣ ದರ್ಶನಂ' ಕೃತಿ ಮತ್ತೊಂದು ಆಯಾಮದಲ್ಲಿ ಮರುವ್ಯಾಖ್ಯಾನ ಮಾಡಿದ್ದಾರೆ. ನಮ್ಮಲ್ಲಿ ಈಗ ಸಾಹಿತ್ಯದ ಮೂಸೆಯಲ್ಲಿ ಮೂಡಿಬಂದ ರಾಮಾಯಣಗಳನ್ನು ಓದಿ ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳುವ ಬದಲು, ಟಿವಿಗಳಲ್ಲಿ ಪ್ರಸಾರವಾಗುವ ಕಮರ್ಷಿಯಲ್ ದೃಷ್ಟಿಕೋನವೊಂದೇ ಜೀವಧಾತುವಾಗಿರುವ ಅರೆಬರೆ ರಾಮಾಯಣವನ್ನು ನೋಡಿ ಆನಂದಿಸಲಾಗುತ್ತಿದೆ.
ಐಚ್ಛಿಕವಾಗಿ ಕನ್ನಡ ವ್ಯಾಸಂಗ ಮಾಡಿರುವ ಅನೇಕ ಎಂಎ ವಿದ್ಯಾರ್ಥಿಗಳೇ ಕುವೆಂಪು ಅವರ ರಾಮಾಯಣ ದರ್ಶನಂ ಕೃತಿಯನ್ನು ಓದಿಲ್ಲ. ಅದು ಅಷ್ಟು ಸುಲಭವಾಗಿ ಅರ್ಥವಾಗದಿರುವುದೂ ಒಂದು ಕಾರಣ ಇರಬಹದು. ಆದರೆ, ’ಕುವೆಂಪು ಹನುಮದ್ದರ್ಶನ’ವು ಅತ್ಯಂತ ಸರಳವಾಗಿ ಎಲ್ಲರಿಗೂ ಅರ್ಥವಾಗುವ ಹಾಗಿದೆ. ಈ ಕೃತಿಯ ಮೂಲಕ ಕೃಷ್ಣಪ್ಪನವರು ಕುವೆಂಪು ಅವರಿಗೆ ನಮನ ಸಲ್ಲಿಸಿದ್ದಾರೆ ಎಂದರು.