ಬೆಂಗಳೂರು : ಪದೇಪದೆ ಮಳೆ ಅನಾಹುತದಿಂದ ರೋಸಿ ಹೋಗಿರುವ ನಗರದ ಕೆಲ ಬಡಾವಣೆಗಳ ಬಾಡಿಗೆದಾರರು ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ. ಪ್ರವಾಹಪೀಡಿತ ಹೊರಮಾವು ಬಳಿಯ ಸಾಯಿ ಬಡಾವಣೆ ಸೇರಿದಂತೆ ಇನ್ನಿತರೆ ಬಡಾವಣೆಗಳಲ್ಲಿ ನೂರಾರು ಮನೆಗಳು ಖಾಲಿಯಾಗಿವೆ. ಮಾಲೀಕರು 'ಮನೆ ಖಾಲಿ ಇದೆ' ಎಂದು ಬೋರ್ಡ್ ನೇತಾಕಿದ್ದಾರೆ.
ಸಿಗದ ಪರಿಹಾರ : ಬಿಬಿಎಂಪಿ ಪ್ರವಾಹ ಉಂಟಾಗುವ ಸ್ಥಳಗಳನ್ನು ಸರ್ವೇಯಲ್ಲಿ ಗುರುತಿಸಿದ್ದರೂ ಈವರೆಗೆ ಯಾವುದೇ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
3,453 ಮನೆಗಳಿಗೆ ಹಾನಿ : ಅಲ್ಪಾವಧಿಯಲ್ಲಿ ಸುರಿದ ಮಳೆಗೆ ಪೂರ್ವ ವಲಯದಲ್ಲಿ 714, ದಕ್ಷಿಣದಲ್ಲಿ 552, ಆರ್‌ಆರ್‌ನಗರ 530, ಪಶ್ಚಿಮ ವಲಯದಲ್ಲಿ 494, ಮಹದೇವಪುರ 461, ದಾಸರಹಳ್ಳಿ 247, ಯಲಹಂಕ 208 ಮತ್ತು ಬೊಮ್ಮನಹಳ್ಳಿಯಲ್ಲಿ 147 ಸೇರಿ 3,453 ಮನೆಗಳು ಹಾನಿಗೊಂಡಿವೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಮಾಲೀಕರು ಕಂಗಾಲು : ರಾಜಕಾಲುವೆ ಮತ್ತು ಚರಂಡಿ ಬದಿಯಲ್ಲಿ ನಿರ್ಮಿಸಿರುವ ಹೆಚ್ಚು ಮನೆಗಳು ಹಾಳಾಗಿವೆ. ಹೀಗಾಗಿ, ಕಡಿಮೆ ಬೆಲೆಗೆ ನಿವೇಶನ ಖರೀದಿಸಿ ಮನೆಗಳನ್ನು ಕಟ್ಟಿರುವ ಮಾಲೀಕರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಮಳೆ ಅನಾಹುತ ಎದುರಿಸಲು ಸಚಿವರ ನೇತೃತ್ವದಲ್ಲಿ ಕಾರ್ಯಪಡೆ ರಚನೆ