ಬೆಂಗಳೂರು: ಮಧುಗಿರಿಯ ಮಾಜಿ ಶಾಸಕ ಕೆ ಎನ್ ರಾಜಣ್ಣ ಅವರು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಬಗ್ಗೆ ನೀಡಿರುವ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅವರು ಕ್ಷಮೆ ಕೇಳಬೇಕು ಎಂದು ನಾನು ಹಾಗೂ ಪಕ್ಷದ ವರಿಷ್ಠರು ಸೂಚಿಸಿದ್ದೇವೆ. ಅವರು ಕೂಡ ಗೌರವಯುತವಾಗಿ ಕ್ಷಮೆ ಕೇಳಿದ್ದಾರೆ. ಈ ವಿಚಾರವನ್ನು ಇಲ್ಲಿಗೇ ಬಿಡೋಣ. ನಮ್ಮನ್ನು ಒಂದಲ್ಲಾ ಒಂದು ದಿನ ಹೊತ್ತುಕೊಂಡು ಹೋಗಬೇಕು. ಇದೇ ಪ್ರಕೃತಿ ನಿಯಮ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಶೃಂಗೇರಿ ಶಾರದಾ ಪೀಠದ ಸ್ವಾಮೀಜಿಗಳು ಮನೆಗೆ ಬಂದಿದ್ದು ಗುರುವಂದನೆ ಮಾಡಿದ್ದೇವೆ. ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಈ ಪೀಠ ಎಲ್ಲಾ ಜಾತಿ, ಧರ್ಮದವರಿಗೂ ಆಶೀರ್ವಾದ ಮಾಡಿಕೊಂಡು, ಧರ್ಮದ ಸೇವೆ ಮಾಡಿಕೊಂಡು ಬಂದಿದೆ. ನಾನು ಶ್ರೀಗಳಿಗೆ ಆಹ್ವಾನ ನೀಡಿದ್ದೆ. ಅವರು ಬಂದು ನನಗೆ, ನನ್ನ ಕುಟುಂಬ ಸದಸ್ಯರು ಹಾಗೂ ಸ್ನೇಹಿತರಿಗೆ ಆಶೀರ್ವಾದ ಮಾಡಿದ್ದಾರೆ ಎಂದರು.
ಸಮೀಕ್ಷೆಯಲ್ಲಿ ಕಾಂಗ್ರೆಸ್ಗೆ ಗೆಲುವು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ನಾಯಕರು ಸೇರಿದಂತೆ ಎಲ್ಲರೂ ಮಾತನಾಡುತ್ತಿದ್ದಾರೆ. ಈ ಅವಕಾಶವನ್ನು ನಾವು ಬಳಸಿಕೊಳ್ಳಬೇಕು. ಪಕ್ಷದ ವತಿಯಿಂದ ನಾವು ಪ್ರತ್ಯೇಕ ಸಮೀಕ್ಷೆ ನಡೆಸಿದ್ದು, ವರದಿ ಪಕ್ಷದ ಪರವಾಗಿದೆ. ಇತ್ತೀಚೆಗಿನ ಚುನಾವಣೆಗಳ ಫಲಿತಾಂಶ ನೋಡಿದರೆ ಬಿಜೆಪಿ ಮತ್ತು ಕಾಂಗ್ರೆಸ್ ಸಮಾನವಾಗಿದೆ ಎಂದು ತಿಳಿಸಿದರು.
ಸಾಮೂಹಿಕ ನಾಯಕತ್ವ: ಪಕ್ಷ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುವುದೇ ಎಂಬ ಪ್ರಶ್ನೆಗೆ, ರಾಹುಲ್ ಗಾಂಧಿ ಹಾಗೂ ಪಕ್ಷದ ವರಿಷ್ಠರು ಮುಂಬರುವ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಬೇಕು ಎಂದು ತೀರ್ಮಾನಿಸಿದ್ದಾರೆ' ಎಂದರು.
ಸಿದ್ದರಾಮೋತ್ಸವ ಕಾರ್ಯಕ್ರಮದ ನಂತರ ಕಾಂಗ್ರೆಸ್ ಖಾಲಿ ಆಗುತ್ತೆ ಎಂಬ ಬಿಜೆಪಿ ಟ್ವೀಟ್ ಕುರಿತು ಕೇಳಿದ ಪ್ರಶ್ನೆಗೆ, ಬೇರೆಯವರು ಏನಾದರೂ ಹೇಳಲಿ. ನಮ್ಮ ಪಕ್ಷದ ನಾಯಕರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ನಾನು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಬೇಕಿತ್ತು, ನಾನು ಕೇದಾರನಾಥಕ್ಕೆ ಹೋಗಿ ಕುಟುಂಬ ಸಮೇತ ಆಚರಿಸಿಕೊಂಡೆ. ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬವನ್ನು ಇಲ್ಲಿ ಈ ರೀತಿ ಆಚರಿಸಲು ಅಭಿಮಾನಿಗಳು ಬಯಸುತ್ತಿದ್ದಾರೆ ಎಂದು ಹೇಳಿದರು.
ಇದು ಶಕ್ತಿ ಪ್ರದರ್ಶನ ಅಲ್ಲ : ನಮ್ಮ ಪಕ್ಷಕ್ಕೆ ಏನೆಲ್ಲಾ ಅನುಕೂಲವಾಗುತ್ತದೆಯೋ ಅದನ್ನೆಲ್ಲ ಮಾಡೋಣ. ಮಲ್ಲಿಕಾರ್ಜುನ್ ಖರ್ಗೆ ಅವರು ಶಾಸಕರಾಗಿ 50 ವರ್ಷ ಆಗಿದೆ, ಆ ಕಾರ್ಯಕ್ರಮ ಮಾಡಬೇಕು ಎಂದು ಅವರ ಅಭಿಮಾನಿಗಳು ಕೇಳುತ್ತಾರೆ. ಪರಮೇಶ್ವರ್ ಅವರ ಅಭಿಮಾನಿಗಳು ಬಂದು ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾಡಬೇಕು ಎಂದು ಕೇಳುತ್ತಾರೆ. ಏನೇ ಸಂಘಟನೆ ಆದರೂ ಅದರಿಂದ ಪಕ್ಷಕ್ಕೆ ಒಳ್ಳೆಯದಾದರೆ ಸಾಕು ಎಂದು ತಿಳಿಸಿದರು.
ಮುಂದೆ ಜಾತಿ ಸಮಾವೇಶಗಳನ್ನು ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲಾ ಸಮಾಜದವರು ಮಾಡಲು ಮುಂದಾಗಿದ್ದಾರೆ. ನಮ್ಮ ಸಮಾಜದ್ದೂ ಆಗಿದೆ. ಬೇರೆ ಸಮಾಜದ್ದೂ ಆಗಿವೆ. ಮಡಿವಾಳರ ಸಮಾಜದ ಸಮಾವೇಶವು ಆಗಿದೆ. ಚುನಾವಣೆಗೂ ಮುನ್ನ ಅವರು ತಮ್ಮ ಬೇಡಿಕೆ ಮುಂದಿಡುವುದರಲ್ಲಿ ತಪ್ಪೇನಿಲ್ಲ ಎಂದರು.
ಇದನ್ನೂ ಓದಿ: ಸೈನಿಕರು, ರೈತರು ಮತ್ತು ವೈದ್ಯರು ದೈವಸ್ವರೂಪಿಗಳು : ವಸತಿ ಸಚಿವ ವಿ. ಸೋಮಣ್ಣ